ನೆಪಕ್ಕಷ್ಟೇ ಬಟ್ಟೆ ಮಾರಾಟ, ಚಲಾಯಿಸುತ್ತಿದ್ದುದು ಪಾಕ್​ನಲ್ಲಿ ತಯಾರಿಸಿದ್ದ ಖೋಟಾ ನೋಟು; ಕೊನೆಗೂ ಮೂವರಿಗೆ 6 ವರ್ಷ ಶಿಕ್ಷೆ

NIa Sep 28
Published on

ಬೆಂಗಳೂರು: ಮಾದನಾಯಕನಹಳ್ಳಿ ನಕಲಿ ನೋಟು ಪ್ರಕರಣದಲ್ಲಿ ಬಂಧಿತ ಮೂವರಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಪಶ್ಚಿಮ ಬಂಗಾಳದ ಮಹಮ್ಮದ್ ಸಜ್ಜದ್ ಆಲಿ, ಅಬ್ದುಲ್ ಕದಿರ್ ಮತ್ತು ವಿಜಯಪುರದ ಎಂ.ಜಿ. ರಾಜು ಶಿಕ್ಷೆಗೆ ಗುರಿಯಾದ ಅಪರಾಧಿಗಳು.

2018ರ ಆ.7ರಂದು ಮಾದನಾಯಕನಹಳ್ಳಿಯ ಆಲೂರು ಹತ್ತಿರದ ಬಿಡಿಎ ಲೇಔಟ್ ಮನೆ ಮೇಲೆ ದಾಳಿ ನಡೆಸಿ ವಿಜಯಪುರದ ಎಂ.ಜಿ. ರಾಜು, ಬಾಗಲಕೋಟೆಯ ಮುಧೋಳದ ಗಂಗಾಧರ್ ಕೋಲ್ಕರ್ ಮತ್ತು ಪಶ್ಚಿಮ ಬಂಗಾಳದ ಮಹಮ್ಮದ್ ಸಜ್ಜದ್ ಆಲಿ, ಅಬ್ದುಲ್ ಕದಿರ್ ಎಂಬುವರನ್ನು ಬಂಧಿಸಿದ್ದರು. 2 ಸಾವಿರ ರೂ. ಮುಖಬೆಲೆಯ 4.34 ಲಕ್ಷ ರೂ. ಮೌಲ್ಯದ ನಕಲಿ ನೋಟು ಜಪ್ತಿ ಮಾಡಿದ್ದರು. ಬಂಧಿತರು ಕೊಟ್ಟ ಸುಳಿವಿನ ಮೇರೆಗೆ ಶ್ರೀರಾಂಪುರದಲ್ಲಿ ವನಿತಾ ಅಲಿಯಾಸ್ ತಂಗಂ ಎಂಬಾಕೆಯನ್ನು ಬಂಧಿಸಿ 2.5 ಲಕ್ಷ ರೂ. ನಕಲಿ ನೋಟು ಜಪ್ತಿ ಮಾಡಿದ್ದರು. ಒಟ್ಟಾರೆ 6.84 ಲಕ್ಷ ರೂ. ಮೌಲ್ಯದ ನಕಲಿ ನೋಟು ಪತ್ತೆಯಾಗಿತ್ತು.

ಆರೋಪಿಗಳ ವಿರುದ್ಧ ತನಿಖೆ ಪೂರ್ಣಗೊಳಿಸಿ ಎನ್‌ಐಎ ಅಧಿಕಾರಿಗಳು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಆರೋಪಿಗಳಾದ ಮಹಮ್ಮದ್ ಸಜ್ಜದ್ ಆಲಿ, ಎಂ.ಜಿ. ರಾಜು ಮತ್ತು ಅಬ್ದುಲ್ ಕದಿರ್ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನು ಪರಿಗಣಿಸಿದ ನ್ಯಾಯಾಲಯ, ಅಪರಾಧಿಗಳೆಂದು ಘೋಷಣೆ ಮಾಡಿ 6 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಡಿ.2ರಂದು ತೀರ್ಪು ನೀಡಿದೆ. ಉಳಿದ ಆರೋಪಿಗಳ ವಿರುದ್ಧದ ವಿಚಾರಣೆ ಮುಂದುವರೆದಿದೆ.

ಪಾಕಿಸ್ತಾನದಲ್ಲಿ ತಯಾರಾಗುತ್ತಿದ್ದ ನಕಲಿ ನೋಟುಗಳನ್ನು ಬಾಂಗ್ಲಾ ಗಡಿ ದಾಟಿಸಿ ರೈಲು ಮೂಲಕ ಮಾದನಾಯಕನಹಳ್ಳಿ ಮತ್ತು ಶ್ರೀರಾಂಪುರದ ಮನೆಯಲ್ಲಿ ಇಟ್ಟುಕೊಂಡು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಗೆ ಸರಬರಾಜು ಮಾಡುತ್ತಿದ್ದರು. ಬಟ್ಟೆ ವ್ಯಾಪಾರದ ಸೋಗಿನಲ್ಲಿ ಶ್ರೀರಾಂಪುರದ ವನಿತಾ, ನಕಲಿ ನೋಟು ದಂಧೆ ನಡೆಸುತ್ತಿದ್ದಳು. ಅಸಲಿ ನೋಟಿಗೆ ಸೆಡ್ಡು ಹೊಡೆಯುವಂತೆ ನಕಲಿ ನೋಟು ಕಾಣುತ್ತಿದ್ದವು. ಸಣ್ಣ ಅಕ್ಷರದ ಸ್ಕ್ರಿಪ್ಟ್, ನೋಟಿನ ಒಳಗಿನ ದಾರದಂತಿರುವ ಥ್ರೆಡ್ ಕಲರ್ ಮತ್ತು ಅಳತೆಯಲ್ಲಿ ಸ್ವಲ್ಪ ಬದಲಾವಣೆ ಉಳಿದಂತೆ ಅಸಲಿ ನೋಟಿನಂತೆ ಇದ್ದು, ಸಾಮಾನ್ಯ ಜನ ಪತ್ತೆಹಚ್ಚುವುದು ಕಷ್ಟವಾಗಿತ್ತು ಎಂದು ಎನ್‌ಐಎ ಆತಂಕ ವ್ಯಕ್ತಪಡಿಸಿತ್ತು. ಈ ಕೇಸಿನಲ್ಲಿ ಪಶ್ಚಿಮ ಬಂಗಾಳದ ಜಹಿರುದ್ದೀನ್ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net