

ಆಯುಕ್ತರ ಹೆಸರಲ್ಲಿ ಫೇಕ್ ಪತ್ರ ಸೃಷ್ಟಿ
ವಿಶೇಷ ವರದಿ
ತುಮಕೂರು: ಮಹಾನಗರ ಪಾಲಿಕೆ ಭೌಗೋಳಿಕ ವ್ಯಾಪ್ತಿ ವಿಸ್ತರಣೆಗೆ 14 ಗ್ರಾಪಂಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿ ಗಡಿ ವಿಸ್ತರಿಸಲು ನಿರಾಕ್ಷೇಪಣಾ ಪತ್ರವನ್ನು ಜಿಪಂನಿಂದ ಕೋರಲಾಗಿದೆ! ಜಿಪಂ ಸಿಇಒಗೆ ಎನ್ಒಸಿ ನೀಡುವಂತೆ ಪಾಲಿಕೆ ಆಯುಕ್ತರು ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ. ಈ ಪತ್ರ (!?) ಸಾಕಷ್ಟು ಸಂಚಲನ ಸೃಷ್ಟಿಸಿದ್ದು ನಗರದ ಸುತ್ತಮುತ್ತಲಿನ ರಿಯೆಲ್ ಎಸ್ಟೇಟ್ "ಭೂಮ್'ಗೆ ಪೂರಕವಾಗಿ ಪತ್ರ ಹರಿದುಬಿಡಲಾಗಿದೆ ಎನ್ನಲಾಗಿದೆ.
14 ಗ್ರಾಪಂಗಳ ಎನ್ಒಸಿ !: ಮಹಾನಗರ ಪಾಲಿಕೆ ಗಡಿ ವಿಸ್ತರಣೆ ವಿಚಾರದಲ್ಲಿ ಗ್ರಾಪಂಗಳ ನಿರಾಕ್ಷೇಪ್ರಣಾ ಪತ್ರ (ಎನ್ಒಸಿ) ಕೋರಿ ಸೆ.10, 2024ರಂದು ಜಿಪಂ ಸಿಇಒಗೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತರ ಹೆಸರಲ್ಲಿ ಬರೆದಿರುವ ಪತ್ರ ಸೃಷ್ಟಿಸಲಾಗಿದೆ. ಈ ಪತ್ರದಲ್ಲಿ ಆಯುಕ್ತರ ಸಹಿ ಇಲ್ಲದೇ ಇರುವುದು ಕಂಡು ಬಂದಿದ್ದು ಈ ಪತ್ರದ ಹಿಂದೆ ರಿಯೆಲ್ ಎಸ್ಟೇಟ್ ಕುಳಗಳ ಕೈವಾಡವಿರುವುದು ಸ್ಪಷ್ಟವಾಗಿದೆ.
ಗೂಳೂರು, ಹೆಗ್ಗೆರೆ, ಕೆ.ಪಾಲಸಂದ್ರ, ಕೆಸರುಮಡು, ಹಿರೇಹಳ್ಳಿ, ಬೆಳಗುಂಬ, ಸ್ವಾಂದೇನಹಳ್ಳಿ, ಅರಕೆರೆ, ಊರುಕೆರೆ, ಬುಗುಡನಹಳ್ಳಿ, ಮಲ್ಲಸಂದ್ರ, ಮೈದಾಳ, ದೊಡ್ಡನಾರವಂಗಲ, ಹೆತ್ತೇನಹಳ್ಳಿ ಗ್ರಾಪಂಗಳಿಂದ ಎನ್ಒಸಿ ಕೋರಲಾಗಿದೆ. ಸಹಜವಾಗಿ ಪಾಲಿಕೆ ಗಡಿ ವಿಸ್ತರಣೆ ಚರ್ಚೆ ನಡುವೆಯೇ ಎನ್ಒಸಿ ಕೋರಿರುವ ಈ ಪತ್ರ ಹರಿದುಬಿಡುವ ಮೂಲಕ ನಗರದ ಸುತ್ತಮುತ್ತ ಭೂಮಿ ಬೆಲೆಯನ್ನು ದುಪ್ಪಟ್ಟು ಮಾಡುವ ಹುನ್ನಾರವಿದೆ.
ಈ ಬಗ್ಗೆ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜರನ್ನು "ವಿಜಯವಾಣಿ' ಸಂಪರ್ಕಿಸಿದಾಗ ಗ್ರಾಪಂಗಳ ಎನ್ಒಸಿ ಕೋರಿ ಯಾವುದೇ ಪತ್ರ ಬರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನೂ ಜಿಪಂ ಸಿಇಒ ಜಿ.ಪ್ರಭು ಅವರು ಅಂತಹ ಯಾವುದೇ ಪತ್ರ ಜಿಪಂಗೆ ಬಂದಿಲ್ಲ ಎಂದಿದ್ದಾರೆ. ಇಂತಹ ನಕಲಿ ಆದೇಶದ ಪತ್ರ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳನ್ನು ಹರಿಯಬಿಡುತ್ತಿರುವರ ವಿರುದ್ಧ ಎ್ಐಆರ್ ಮಾಡಿಸುವ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮಾಹಿತಿಗೆ ಪತ್ರ
ಮಹಾನಗರ ಪಾಲಿಕೆ ಗಡಿ ವಿಸ್ತರಣೆ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸುತ್ತಮುತ್ತಲಿನ ಪ್ರದೇಶಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸೇರಿದಂತೆ ಜನಸಂಖ್ಯೆ ಮಾಹಿತಿಯನ್ನು ಕಲೆಹಾಕುತ್ತಿದೆ. ಹಾಗಾಗಿ, ನಗರಕ್ಕೆ ಹೊಂದಿಕೊಂಡಿರುವ ಹೊರವಲಯದ ಗ್ರಾಪಂಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಹಾಗೂ ಜನಸಂಖ್ಯೆ ಮಾಹಿತಿ ನೀಡಲು ಕೋರಿ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ ಹೊರತು ಎನ್ಒಸಿ ಕೋರಿ ಯಾವುದೇ ಪತ್ರ ಬರೆದಿಲ್ಲ ಎಂದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸ್ಪಷ್ಟಪಡಿಸಿದ್ದಾರೆ.
10 ತಿಂಗಳಾದರು ಪಾಲಿಕೆ ಚುನಾವಣೆ ಸದ್ದಿಲ್ಲ !
ಆಗಸ್ಟ್ 31, 2018ರಲ್ಲಿ ಪಾಲಿಕೆಗೆ ಚುನಾವಣೆ ನಡೆದಿದ್ದು ಸೆ.3ಕ್ಕೆ ಫಲಿತಾಂಶ ಹೊರಬಿದ್ದಿತ್ತು. ಮೊದಲ ಅವಧಿಯ ಮೇಯರ್, ಉಪಮೇಯರ್ ಸ್ಥಾನದ ಚುನಾವಣಾ ಮೀಸಲು ನಿಗದಿ ತಡವಾಗಿದ್ದರಿಂದ 2019, ಜ.30ರಂದೇ ನೂತನ ಮೇಯರ್, ಉಪಮೇಯರ್ ಆಯ್ಕೆಯೊಂದಿಗೆ ಹೊಸ ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬಂದಿತ್ತು. ಜ.30, 2019ರಂದು ಅಸ್ತಿತ್ವಕ್ಕೆ ಬಂದಿದ್ದ ಚುನಾಯಿತ ಮಂಡಳಿಯ ಆಡಳಿತವು ಜ.29, 2024ಕ್ಕೆ ಅಂತ್ಯಗೊಳ್ಳುವುದರೊಂದಿಗೆ ಕಾಪೋರ್ರೇಟರ್ಗಳು ಮಾಜಿಗಳಾದರು. ಪಾಲಿಕೆ ಅವಧಿ ಅಂತ್ಯಗೊಂಡು 10 ತಿಂಗಳಾದರು ಈವರೆಗೆ ಸರ್ಕಾರವು ಚುನಾವಣೆ ನಡೆಸುವ ಬಗ್ಗೆ ಚಿಂತನೆ ನಡೆಸಿಲ್ಲ. ಈಗ ಗಡಿ ವಿಸ್ತರಣೆ ನೆಪ ಮುಂದಿಟ್ಟುಕೊಂಡು ಚುನಾವಣೆಯನ್ನು ಮತ್ತಷ್ಟು ಕಾಲ ಮುಂದೂಡುವ ಸಾಧ್ಯತೆಗಳು ಹೆಚ್ಚಿವೆ.