

ಬಾಗಲಕೋಟೆ: ಇಂಟಲಿಜೆನ್ಸಿ ಬ್ಯುರೋದಲ್ಲಿ ಅಧಿಕಾರಿ ಇದ್ದೇನೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ ಯುವಕನೊಬ್ಬ ರಬಕವಿ-ಬನಹಟ್ಟಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ನಾವಲಗಿ ಗ್ರಾಮದ ಸಂತೋಷ ಲಕ್ಕಪ್ಪಗೋಳ ಎನ್ನುವ ಯುವಕನೇ ನಕಲಿ ಇಂಟಲಿಜೆನ್ಸಿ ಅಧಿಕಾರಿ.
ಊರಲ್ಲಿ ಹಾಗೂ ಕುಟುಂಬದಲ್ಲಿ ಗೌರವ ಹೆಚ್ಚಿಸಿಕೊಳ್ಳಲು ತಾನೊಬ್ಬ ಇಂಟಲಿಜೆನ್ಸಿ ಅಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ. ನಕಲಿ ಐಡಿ ಕಾರ್ಡ್ ಹೊಂದಿದ್ದ ಈತ, ಲೈಟರ್ ಹಾಗೂ ಕೆಟ್ಟಿದ್ದ ವಾಕಿಟಾಕಿ ಇಟ್ಟುಕೊಂಡು ಸುತ್ತಾಡುತ್ತಿದ್ದ. ರಬಕವಿ-ಬನಹಟ್ಟಿ ಚೆಕ್‌ಪೋಸ್ಟ್‌ನಲ್ಲಿ ಸಂಚರಿಸುತ್ತಿದ್ದ ಈತನ ವರ್ತನೆ ಬಗ್ಗೆ ಅನುಮಾನಗೊಂಡ ಪೊಲೀಸರು ಐಡಿ ಕಾರ್ಡ್ ಪರಿಶೀಲಿಸಿದಾಗ ಅದು ನಕಲಿ ಎನ್ನುವುದು ಗೊತ್ತಾಗಿದೆ. ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತನ ನಕಲಿ ಮುಖ ಹೊರಬಂದಿದೆ.
ಸಂತೋಷ ಲಕ್ಕಪ್ಪಗೋಳನನ್ನು ವಶಕ್ಕೆ ಪಡೆದಿರುವ ರಬಕವಿ-ಬನಹಟ್ಟಿ ಪೊಲೀಸರು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ತಿಳಿಸಿದ್ದಾರೆ.