ನಕಲಿ ಗಾಂಧಿಗಳಿಂದ ಸರ್ಕಾರದ ದುಡ್ಡು ಪೋಲು

19 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳು ಸೇರಿ ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ಹೆಸರಿನಲ್ಲಿ ಸರ್ಕಾರದ ದುಡ್ಡು ಪೋಲು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಕಾಂಗ್ರೆಸ್​ ಪಕ್ಷ ವಿಸರ್ಜಿಸಲು ಹೇಳಿದ್ದರು. ಅವರು ಹೇಳಿದಂತಹ ಪಕ್ಷ ಈಗ ಅಸ್ತಿತ್ವದಲ್ಲಿಲ್ಲ. ಸದ್ಯ ಇರುವುದು ಓರಿಜಿನಲ್​ ಅಲ್ಲ. ಡುಪ್ಲಿಕೇಟ್​ ಕಾಂಗ್ರೆಸ್​. ಸರ್ಕಾರದ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್​ ಸರ್ಕಾರದಲ್ಲಿ ದುಡ್ಡು ಇಲ್ಲದ ಕಾರಣ ಹಲವು ಕಾರ್ಯಕ್ರಮಗಳು ನಿಂತು ಹೋಗಿವೆ ಎಂದು ಒಂದು ವರದಿ ಹೇಳಿದೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್​ನವರು ಸಮಾವೇಶದ ಹೆಸರಿನಲ್ಲಿ ಹಣ ಪೋಲು ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್​ ನಾಯಕರ ಆಂತರಿಕ ಬಡಿದಾಟದಿಂದ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಇವರ ಬಡಿದಾಟದ ವಿಷಯ ಬಿಟ್ಟು ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ಮುಖ್ಯಮಂತ್ರಿ ಸೇರಿ ಹಲವರು ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ನಾವೂ ಅವರ ಪಕ್ಷದ ಬಡಿದಾಟದ ಬಗ್ಗೆ ಮಾತನಾಡಬೇಕಾಗಿದೆ ಎಂದರು.

ರಸ್ತೆ ಬದಿ ವ್ಯಾಪಾರ ಮಾಡುವವರ, ಹಳ್ಳಿಯಲ್ಲಿ ರೈತರ ಜಾಗ ಬಿಟ್ಟು ಉಳಿದ ಜಾಗಕ್ಕೆ ಗುರುತು ಕೊಡುವುದು ಸ್ವಾಮಿತ್ವ ಯೋಜನೆಯ ಉದ್ದೇಶ. ಇದು ಭಾರತ ಸರ್ಕಾರದ ಯೋಜನೆ. ಇದನ್ನು ಆರಂಭಿಸಿದ್ದೇ ನಾವು. ಪ್ರಧಾನಮಂತ್ರಿ ನರೇಂದ್ರ ಮೋದಿ ಪೂರ್ವ ಆಡಳಿತ ನಡೆಸಿದ್ದ ಕಾಂಗ್ರೆಸ್​ಗೆ ಹಳ್ಳಿಯಲ್ಲಿ ವಾಸ ಮಾಡುವ ಜನರ ಮನೆ ಹಾಗೂ ಸುತ್ತಮುತ್ತಲ ವಾತಾವರಣದ ಬಗ್ಗೆ ಲಕ್ಷ್ಯ ಇರಲಿಲ್ಲ. ಆದರೆ ಯೋಜನೆ ಜಾರಿಗೆ ತಂದ ಪ್ರಧಾನಿ ಮೋದಿ ಹೆಸರನ್ನೇ ಹೇಳುವುದಿಲ್ಲ. ಈಗ ಸಚಿವ ಸಂತೋಷ ಲಾಡ್​ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್​ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net