

ಬೆಂಗಳೂರು: ಬಿಬಿಎಂಪಿಗೆ ಗಡಿಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಗಂಗೇನಹಳ್ಳಿ, ವರ್ತೂರು, ನರಸೀಪುರ ಮತ್ತು ಪೆದ್ದನಪಾಳ್ಯ ಗ್ರಾಮಗಳಿಗೆ ಸೇರಿದ 1,000 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳು ಕಬ್ಜ ಮಾಡಿಕೊಂಡಿದ್ದಾರೆ. ಈ ಬೃಹತ್ ಸ್ವತ್ತುಗಳನ್ನು ವಶಕ್ಕೆ ಪಡೆದು ಸರ್ಕಾರಿ ಜಮೀನಾಗಿ ಉಳಿಸಬೇಕು ಎಂದು ಕೋರಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ನಗರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ತಿಪ್ಪಗೊಂಡನಹಳ್ಳಿ ಜಲಾಶಯ ಸೇರಿಕೊಳ್ಳುವ ಅರ್ಕಾವತಿ ನದಿಪಾತ್ರದ ಬಳಿಯಿರುವ ಈ ನಾಲ್ಕೂ ಗ್ರಾಮಗಳಲ್ಲಿ ನೂರಾರು ವಿಸ್ತೀರ್ಣದ ಖರಾಬು, ಗೋಮಾಳ, ಸರ್ಕಾರಿ ಬಂಡೆ, ಸ್ಮಶಾನ, ಬಂಡಿದಾರಿ, ಸರ್ಕಾರೀ ಹಳ್ಳ, ಸರ್ಕಾರೀ ಗುಡ್ಡ ಇವೆ. ಈ ಎಲ್ಲ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು ಕಂಪನಿ ರಚಿಸಿಕೊಂಡು ಸರ್ಕಾರಿ ಜಮೀನನ್ನು ವರ್ಗಾಯಿಸಿಕೊಂಡಿದ್ದಾರೆ. ಮೂಲ ಭೂ ದಾಖಲೆಪತ್ರಗಳಿಲ್ಲದೆ ಹಾಗೂ ಸರ್ಕಾರಿ ಜಮೀನು ಮಂಜೂರಾತಿ ಆಗದಿದ್ದರೂ, ಬೃಹತ್ ಪ್ರಮಾಣದ ಸರ್ಕಾರಿ ಸ್ವತ್ತಿಗೆ ಮಾಲೀಕತ್ವ ಪಡೆಯಲಾಗಿದೆ. ಈ ಭೂ ವ್ಯವಹಾರದಲ್ಲಿ ನಗರ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಬ್ ರಿಜಿಸ್ಟ್ರಾರ್‌ಗಳು ಷಾಮೀಲಾಗಿರುವುದರಿಂದ ಅಂದಾಜು 10 ಸಾವಿರ ಕೋಟಿ ರೂ. ಮೊತ್ತದ ಜಮೀನು ಸರ್ಕಾರದ ಕೈತಪ್ಪುವ ಹಂತ ತಲುಪಿದೆ ಎಂದು ಅವರು ಡಿಸಿಗೆ ನೀಡಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದಾಖಲೆ ಪರಿಶೀಲಿಸದೆ ನೋಂದಣಿ:
ಕರ್ನಾಟಕ ಭೂಕಂದಾಯ ಕಾಯ್ದೆ ಪ್ರಕಾರ ಸ್ಥಳೀಯ ಗ್ರಾಮಸ್ಥರಲ್ಲದ ಹಾಗೂ ಆಯಾ ಗ್ರಾಮಗಳ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡಲು ಸಾಗುವಳಿ ಚೀಟಿ ಹೊಂದಿಲ್ಲದವರಿಗೆ ಸರ್ಕಾರಿ ಜಮೀನು ಮಂಜೂರಾತಿ ಮಾಡುವಂತಿಲ್ಲ. ಈ ಅಂಶವನ್ನು ಬದಿಗಿರಿಸಿ ಉತ್ತರ ಭಾರತದ ನಿವಾಸಿಗಳಿಗೆ ಭೂ ಮಂಜೂರಾತಿ ಮಾಡಲಾಗಿದೆ. ಈ ದಾಖಲೆಗಳನ್ನು ಪರಿಶೀಲಿಸದೆ ತಾವರೆಕೆರೆ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳು ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. ಈ ಸ್ವತ್ತಿಗೆ ಸಂಬಂಧಿಸಿ 1965ರಿಂದ 2018 ರವರೆಗಿನ ಕೈ ಬರಹದ ಪಹಣಿ ಪರಿಶೀಲನೆ, ಮೂಲ ಖೇತುವಾರು ಮತ್ತು ಆಕಾರ್ ಬಂದ್, ಮೈಸೂರು ಸೆಟಲ್‌ಮೆಂಟ್ ಕಾಪಿ, ಇನಾಂ ಡಿಸಿ ಆದೇಶ ಹಾಗೂ ಕರ್ದಾ ಪ್ರತಿಗಳ ದಾಖಲೆಗಳನ್ನು ಒದಗಿಸುವಂತೆ ಬೆಂಗಳೂರು ದಕ್ಷಿಣ ತಾಲೂಕು ತಹಸೀಲಾರ್ ಕಚೇರಿಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರೂ, ಈವರೆಗೂ ಮಾಹಿತಿ ನೀಡಿಲ್ಲ. 2013-14ರಿಂದ 2017-18ರ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಸರ್ಕಾರಿ ಜಮೀನು ಕಬಳಿಕೆ ಆಗಿದೆ. 2018ರಲ್ಲೇ ಭೂಕಬಳಿಕೆ ಸಂಬಂಧ ಆಗಿನ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಮೇಶ್ ದೂರಿದ್ದಾರೆ.
ಮೂಲ ದಾಖಲೆ ನಾಶಕ್ಕೆ ಯತ್ನ?:
ಮುಖ್ಯವಾಗಿ ಕೃಷಿ ಭೂಮಿಗೆ ಸಂಬಂಧಿಸಿ ನಮೂನೆ -7ಅ ಯಲ್ಲಿ ಆಯಾ ಜಮೀನಿನಲ್ಲಿ ವ್ಯವಸಾಯ ಮಾಡುವ ಗೇಣಿದಾರರ ವಿವರ ಇರುತ್ತದೆ. ಆದರೆ, ಕಬ್ಜ ಮಾಡಿಕೊಂಡಿರುವ ಜಮೀನುಗಳಿಗೆ ಗೇಣಿದಾರರ ವಿವರಗಳೇ ಇಲ್ಲ. ಹಾಗಾಗಿ ಈ ಜಮೀನು ಪೂರ್ಣವಾಗಿ ಸರ್ಕಾರಿ ಸ್ವತ್ತೇ ಆಗಿದೆ. ಈ ತಪ್ಪು ಮುಚ್ಚಿಕೊಳ್ಳಲು ಖಾಸಗಿ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜತೆಗೆ ಅನ್ಯರಿಗೆ ಮಾರಾಟ ಮಾಡುತ್ತಿದ್ದು, ಕೆಲ ಸ್ವತ್ತುಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ನಾಶಪಡಿಸುವ ಕೆಲಸಕ್ಕೂ ಪಟ್ಟಭದ್ರರು ಕೈಹಾಕಿದ್ದಾರೆ. ಈ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.