

ಸಿರವಾರ: ತಾಲೂಕಿನ ಕೆ.ಗುಡದಿನ್ನಿ ಗ್ರಾಮದ ಸೀಮಾದಲ್ಲಿರುವ 42.29 ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಅಧಿಕಾರಿಗಳ ನಕಲಿ ದಾಖಲಿಸಿ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದು ಕೆಆರ್‌ಎಸ್ ಸಂಘಟನೆ ಜಿಲ್ಲಾ ಸಮಿತಿ ಸದಸ್ಯ ನಾಗರಾಜ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಂ.11/ಅ, 11/ಆ ಮತ್ತು 52 ರಲ್ಲಿನ 42 ಎಕರೆ 29 ಗುಂಟೆ ಭೂಮಿಯನ್ನು ಕಂದಾಯ ಅಧಿಕಾರಿಗಳು ವಂಶಾವಳಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸೃಷ್ಟಿಸಿ ಅನಧಿಕೃತವಾಗಿ ವರ್ಗಾವಣೆ ಮಾಡಿದ್ದಾರೆ. ಈ ಹಿಂದೆ 1972 ರಲ್ಲಿ ಈ ಭೂಮಿ ಖಾಸಗಿ ವ್ಯಕ್ತಿಗಳದ್ದಾಗಿತ್ತು. 50 ವರ್ಷಗಳಿಂದ ಅವರು ಪತ್ತೆಯಿಲ್ಲದ ಕಾರಣದಿಂದಾಗಿ ಸರ್ಕಾರ ಸ್ವಾಧೀನಕ್ಕೆ ಪಡೆದುಕೊಂಡಿತ್ತು.
2017ರಲ್ಲಿ ಕಂದಾಯ ಅಧಿಕಾರಿಗಳ ಕೈಚಳಕದಿಂದ ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಆಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ವರ್ಗಾಯಿಸಿದ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಹನುಮಂತ ಕುಂಬಾರ, ಹುಲಿಗೆಪ್ಪ ಮಡಿವಾಳ, ಶಿವಯ್ಯ ಲಕ್ಕಂದಿನ್ನಿ, ವೀರೇಶ ನಾಯಕ, ಮಲ್ಲೇಶ ಮದ್ಲಾಪುರ, ಶಿವರಾಜ ದೊಡ್ಡಿ, ಮೌಲಪ್ಪ, ಮಲ್ಲಯ್ಯ ಲಕ್ಕಂದಿನ್ನಿ, ಗೌರಪ್ಪ ಇತರರಿದ್ದರು.