

ಮಂಗಳೂರು: ನಕಲಿ ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಿರ್ಕನಕಟ್ಟೆ ಬಜ್ಜೋಡಿ ನಿವಾಸಿ ಬರ್ನಾಡ್ ರೋಶನ್ ಮೆಸ್ಕರೆನಸ್(41) ಬಂಧಿತ ಆರೋಪಿ. ಕಂಕನಾಡಿ ಪಂಪ್‌ವೆಲ್‌ನ ಹಳೇ ರಸ್ತೆಯಲ್ಲಿರುವ ವಿಶ್ವಾಸ್ ಕ್ರೌನ್ ಅಪಾರ್ಟ್‌ಮೆಂಟ್‌ನ ನೆಲ ಅಂತಸ್ತಿನಲ್ಲಿರುವ ಕೊಠಡಿಯೊಂದರಲ್ಲಿ ಹೆಲ್ಪ್ ಲೈನ್ ಮಂಗಳೂರು ಎಂಬ ಹೆಸರಿನ ಸಂಸ್ಥೆಯನ್ನು ಇಟ್ಟು ಕೊಂಡು ಆಧಾರ್ ಕಾರ್ಡ್, ಪಡಿತರ ಚೀಟಿ, ಅಂಕ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿಗಳ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಇತರೇ ದಾಖಲಾತಿಗಳನ್ನು ಮಾಡಿಕೊಟ್ಟು ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ವಂಚಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸುತ್ತಿದ್ದ ಆರೋಪಿಯನ್ನು ಬಂಧಿಸಿದರು.
ಆತನು ವಿವಿಧ ಹೆಸರಿನಲ್ಲಿ ತಯಾರಿಸಿದ ನಕಲಿ ಆಧಾರ್ ಕಾರ್ಡ್‌ಗಳು, ನಕಲಿ ರೇಷನ್ ಕಾರ್ಡ್, ನಕಲಿ ಉದ್ದಿಮೆ ಪರವಾನಗಿಗೆ ಪತ್ರ, ನಕಲಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಳೆದ 3 ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದುಕೊಂಡವರು ಅವುಗಳನ್ನು ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಯಿಂದ ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದ ಲ್ಯಾಪ್ ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್, ಬಯೋ ಮೆಟ್ರಿಕ್ ಡಿವೈಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಕಲಿ ದಾಖಲೆ ಪತ್ರ ತಯಾರಿಸುವ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರುಗಳ ಪತ್ತೆ ಕಾರ್ಯ ಮುಂದುವರಿದಿದೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ನಡೆಸಿದ್ದಾರೆ.