ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗಳ ಚಿನ್ನ ಕದ್ದ ನಕಲಿ ಡಾಕ್ಟರ್! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ

theft case
Published on

ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ಸೋಗಿನಲ್ಲಿ ಬಂದ ಖತರ್ನಾಕ್​ ಕಳ್ಳಿಯೊಬ್ಬಳು ಇಬ್ಬರು ಮಹಿಳಾ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದ ಸೇಂಟ್ ಫಿಲೋಮಿನ ಆಸ್ಪತ್ರೆಯಲ್ಲಿ ನಡೆದಿದೆ.

ಈ ಬಗ್ಗೆ ಟಿ.ಸಿ.ಪಾಳ್ಯದ ನಿವಾಸಿ ಜೆ. ರಮೇಶ್‌ಕುಮಾರ್ ಎಂಬುವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ. ಇದರ ಮೇರೆಗೆ ಅಪರಿಚಿತ ಮಹಿಳೆ ಮತ್ತು ಸೆಂಟ್ ಫಿಲೋಮಿನ ಆಸ್ಪತ್ರೆ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ರಮೇಶ್, ಜ.13ರ ರಾತ್ರಿ 11.30ರಲ್ಲಿ ತಮ್ಮ ತಾಯಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಸೇಂಟ್ ಫಿಲೋಮಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಜ.14ರ ಮಧ್ಯಾಹ್ನ 2.45ರಲ್ಲಿ 35 ವರ್ಷದ ಮಹಿಳೆ, ಬಿಳಿ ಕೋಟ್ ಧರಿಸಿಕೊಂಡು ಬಂದು ರಮೇಶ್ ಬಳಿ ಡಾಕ್ಟರ್ ಎಂದು ಹೇಳಿದ್ದಾಳೆ. ಇರಬಹುದು ಎಂದು ಸುಮ್ಮನಾದ ಮೇಲೆ ಆಕೆ 10 ನಿಮಿಷ ಹೊರಗೆ ನಿಲ್ಲಿ ತಪಾಸಣೆ ನಡೆಸಬೇಕೆಂದು ಸೂಚಿಸಿದ್ದಾಳೆ. ಅದರಂತೆ ರಮೇಶ್, ಹೊರಗೆ ಬಂದಿದ್ದಾರೆ. 10 ನಿಮಿಷವಾದ ಮೇಲೆ ಡಾಕ್ಟರ್ ಸೋಗಿನಲ್ಲಿ ಬಂದಿದ್ದ ಮಹಿಳೆ ಹೊರಗೆ ಹೋಗಿದ್ದಾಳೆ. ಸ್ವಲ್ಪ ಹೊತ್ತಿಗೆ ನರ್ಸ್ ಬಂದು ರಕ್ತ ಪರೀಕ್ಷೆ ನಡೆಸಬೇಕೆಂದು ಹೇಳಿದ್ದಾಳೆ. ಅದಕ್ಕೆ ರಮೇಶ್, ಈಗ ತಾನೇ ಡಾಕ್ಟರ್ ಬಂದು ಹೋಗಿದ್ದಾರೆ ಎಂದಾಗ ನರ್ಸ್‌ಗೆ ಆಶ್ಚರ್ಯವಾಗಿದೆ. ಯಾರೆಂದು ಪರಿಶೀಲನೆ ನಡೆಸಿದಾಗ ಅಪರಿಚಿತ ಮಹಿಳೆ ಬಂದಿರುವುದು ಖಚಿತವಾಗಿದೆ.

ಅಷ್ಟರಲ್ಲಿ ರಮೇಶ್ ಅವರ ತಾಯಿಯ ಮೈಮೇಲಿದ್ದ ಉಂಗುರ, ಚಿನ್ನದ ಸರ ಸೇರಿ 46 ಗ್ರಾಂ ಚಿನ್ನ ಕಳವಾಗಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಚರ್ಚೆ ನಡೆಯುತ್ತಿರುವ ಸಮಯದಲ್ಲಿಯೇ ಮತ್ತೊಂದು ವಾರ್ಡ್‌ನಲ್ಲಿ 58 ವರ್ಷದ ಮಹಿಳಾ ರೋಗಿಯ ಬಳಿಗೆ ಹೋಗಿ ಜೊತೆಯಲ್ಲಿ ಇದ್ದ ಸಂಬಂಧಿಕರನ್ನು ಹೊರಗೆ ಕಳುಹಿಸಿ ಅವರ ಬಳಿಯೂ ಚಿನ್ನಾಭರಣ ಕಳವು ಮಾಡಿದ್ದಾಳೆ. ಅಲ್ಲದೆ, ಡಿಸ್ಚಾರ್ಜ್​ ಆಗಬೇಕಿದ್ದ ಮಹಿಳೆಯನ್ನು 45 ನಿಮಿಷಗಳ ನಂತರ ಮನೆಗೆ ಕಳುಹಿಸಿ ಎಂದು ಹೇಳಿ ಅಲ್ಲಿಂದ ಪರಾರಿ ಆಗಿದ್ದಾಳೆ.

ಕೆಲವೇ ನಿಮಿಷಗಳಲ್ಲಿ ಇಬ್ಬರು ಮಹಿಳಾ ರೋಗಿಗಳ ಬಳಿ ಅಪರಿಚಿತ ಮಹಿಳೆ ಚಿನ್ನಾಭರಣ ಕಳವು ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಅಶೋಕನಗರ ಠಾಣೆಗೆ ದೂರು ನೀಡಿದ್ದು, ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಅಲ್ಲದೆ, ಆಸ್ಪತ್ರೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ದೃಶ್ಯಾವಳಿ ವಶಕ್ಕೆ ಪಡೆದು ಆರೋಪಿ ಪತ್ತೆಗೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net