

ವಿಜಯವಾಣಿ ವಿಶೇಷ ನಾಪೋಕ್ಲು
ಯಾವುದೇ ವೈದ್ಯಕೀಯ ಪದವಿ ಪಡೆಯದ ಭಾರತೀಯ ಸೇನೆ (ನೆವಿ)ಯ ನಿವೃತ್ತ ಮೆಡಿಕಲ್ ಸಹಾಯಕನೊಬ್ಬ ಕಕ್ಕಬ್ಬೆ ಗ್ರಾಮದಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದು, ನಕಲಿ ವೈದ್ಯರೆಂದು ಪತ್ತೆಯಾಗಿದೆ.
ಭಾರತೀಯ ಸೇನೆ (ನೆವಿ)ಯ ನಿವೃತ್ತ ಮೆಡಿಕಲ್ ಸಹಾಯಕ ಕೃಷ್ಣ ಅವರು ಕಕ್ಕಬ್ಬೆಯಲ್ಲಿ ಖಾಸಗಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆದಿದ್ದು, ವೈದ್ಯರಾಗಿ ರೋಗಿಗಳಿಗೆ ತಪಾಸಣೆ ನಡೆಸಿ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಮಡಿಕೇರಿಯ ಆಸ್ವತ್ರೆಗಳಿಗೆ ಶಿಪಾರಸು ಮಾಡುತ್ತಿದ್ದಾರೆ.
ಶುಕ್ರವಾರ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿ ಸಂಶಯಗೊಂಡು ಕೃಷ್ಣ ಅವರ ಬಗ್ಗೆ ವಿಚಾರಿಸಿದಾಗ ಭಾರತೀಯ ಸೇನೆ (ನೆವಿ)ಯ ನಿವೃತ್ತ ಸಹಾಯಕ ಮೆಡಿಕಲ್ ಅಧಿಕಾರಿ ಎಂದು ಪತ್ತೆಯಾಗಿದ್ದು, ಇವರು ಆರೋಗ್ಯ ಇಲಾಖೆಯಿಂದ ಯಾವುದೇ ಅನುಮತಿ ಅಥವಾ ಪರವಾನಗಿ ಪಡೆದಿಲ್ಲ. ಇದರಿಂದ ಈತ ನಕಲಿ ವೈದ್ಯನೆಂದು ಗೊತ್ತಾಗಿದೆ ಎಂದು ನಾಪೋಕ್ಲುವಿನ ಆರ್‌ಟಿಐ ಕಾರ್ಯಕರ್ತ ಕೆ.ಎ.ಹ್ಯಾರಿಸ್ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿರುವ ಬಗ್ಗೆ ಸಾರ್ವಜನಿಕರು ಕಿಡಿಕಾರಿದ್ದಾರೆ. ಇಂತಹ ಅಧಿಕಾರಿಗಳಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಸಾರ್ವಜನಿಕರು ತಿಳಿಸಿದರು.
ನಾನು ಭಾರತೀಯ ಸೇನೆ (ನೆವಿ)ಯಲ್ಲಿ ಮೆಡಿಕಲ್ ಸಹಾಯಕನಾಗಿ ಕೆಲಸ ಮಾಡಿದ್ದು, ನಿವೃತ್ತಿ ನಂತರ ಹೊರ ದೇಶದಲ್ಲೂ ಮೆಡಿಕಲ್ ಬಗ್ಗೆ ಕೆಲಸ ಮಾಡಿದ್ದೇನೆ. ಅಗತ್ಯವಿದ್ದರೆ ನಾಳೆಯೇ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯುತ್ತೇನೆ. ಮುಂದೆ ಊರಿನ ಜನ ಬಯಸಿದರೆ ಮಾತ್ರ ಚಿಕಿತ್ಸೆ ನೀಡುತ್ತೇನೆ.
ಕೃಷ್ಣ, ನಿವೃತ್ತ ಮೆಡಿಕಲ್ ಸಹಾಯಕ , ಭಾರತೀಯ ಸೇನೆ
ಕಕ್ಕಬ್ಬೆಯ ಖಾಸಗಿ ಪ್ರಥಮ ಚಿಕಿತ್ಸಾ ಕೇಂದ್ರದ ವೈದ್ಯ ಕೃಷ್ಣ ಅವರಿಗೆ ದಾಖಲೆ ತರುವಂತೆ ಸೂಚಿಸಲಾಗಿದೆ. ಪರಿಶಿಲನೆ ವೇಳೆ ದಾಖಲೆ ಸರಿ ಇಲ್ಲದಿದ್ದಲ್ಲಿ ಇವರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು.
ಡಾ.ಕೆ.ಮೋಹನ್ ಕುಮಾರ್, ಡಿಎಚ್‌ಒ
ನಕಲಿ ವೈದ್ಯರು ಕಣ್ಣೇದುರೇ ಇದ್ದರೂ ತಿಳಿಯದ ಜಿಲ್ಲಾ ಆರೋಗ್ಯಾಧಿಕಾರಿಗಳು ನಿದ್ರೆಯಲ್ಲಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಸಚಿವರಿಗೆ ದೂರು ನೀಡಲಾಗುವುದು.
ಕೆ.ಎ.ಹ್ಯಾರಿಸ್, ಕಾರ್ಯಕರ್ತ, ಆರ್‌ಟಿಐ
ನಮದು ಗುಡ್ಡಗಾಡು ಪ್ರದೇಶ. ಇಲ್ಲಿ ತುರ್ತು ಅವಘಡ ಸಂಭವಿಸಿದರೆ ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈ ವೇಳೆ ಪ್ರಥಮ ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಆದ್ದರಿಂದ ಕೃಷ್ಣ ಅವರು ಗ್ರಾಮದಲ್ಲಿ ಚಿಕಿತ್ಸೆ ಮುಂದುವರಿಸಲಿ.
ವಿ.ಎ.ಉಸ್ಮಾನ್, ಉಪಾಧ್ಯಕ್ಷ, ಕಕ್ಕಬ್ಬೆ ಗ್ರಾಪಂ