

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದಲ್ಲಿ ಗುರುವಾರ ಬೆಳಗ್ಗೆ ಹೂವಿನ ವ್ಯಾಪಾರಿಯೊಬ್ಬರ ಬಳಿ ಬಂದ ಗ್ರಾಹಕನೊಬ್ಬ 20 ರೂಪಾಯಿ ಬೆಲೆಯ ಹೂವನ್ನು ಖರೀದಿಸಿ, 200 ರೂಪಾಯಿ ಕೊಟ್ಟಿದ್ದ. ಅವರು ಕೂಡಲೇ ಬಾಕಿ ಚಿಲ್ಲರೆಯನ್ನೂ ಗ್ರಾಹಕನಿಗೆ ಹಿಂದಿರುಗಿಸಿದ್ದರು. ಆದರೆ, ಸ್ವಲ್ಪ ಹೊತ್ತಿನಲ್ಲೇ ನೋಟಿನ ಬಗ್ಗೆ ಅನುಮಾನ ಮೂಡಿ ಅಲ್ಲೇ ಇದ್ದ ರಿಕ್ಷಾ ಚಾಲಕರಿಗೆ ತೋರಿಸಿದ್ದರು. ಅದು ಕಳ್ಳನೋಟು ಎಂದು ಅರಿವಾಗಿ ಬೇಸ್ತು ಬಿದ್ದಿದ್ದಾರೆ.
ಅರಕಲಗೂಡಿನ ಮೂರ್ತಿ ಎಂಬ ಹೂವಿನ ವ್ಯಾಪಾರಿಗೆ ಈ ರೀತಿ ಮೋಸವಾಗಿದೆ. ಹೀಗಾಗಿ ಈಗ ಹೊಸ ನೋಟುಗಳನ್ನು ಸ್ವೀಕರಿಸುವಾಗಲೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾದ್ದು ಅವಶ್ಯ ಎಂದು ಈ ಘಟನೆಯನ್ನು ಗಮನಿಸಿದವರು ಹೇಳತೊಡಗಿದ್ದಾರೆ.
ಕಳ್ಳನೋಟು ದಂಧೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೋಟು ನಿಷೇಧಿಸಿ ಹೊಸ ನೋಟು ಚಲಾವಣೆಗೆ ತಂದು ಮೂರ್ನಾಲ್ಕು ವರ್ಷವಾಗಿದೆಯಷ್ಟೆ. ಆಗಲೇ ಕಳ್ಳನೋಟು ಮತ್ತೆ ಚಲಾವಣೆಗೆ ಬಂದಿದೆ. ಇದನ್ನು ತಡೆಯಲು ಸರ್ಕಾರ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಶಯ.