

ಶಿವಮೊಗ್ಗ: ಭದ್ರಾವತಿಯಲ್ಲಿ ನಕಲಿ ನೋಟುಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ 500 ರೂ. ಮುಖಬೆಲೆಯ 13 ನೋಟು, 200, 100, 50 ರೂ. ಮುಖಬೆಲೆಯ ತಲಾ 1 ನೋಟುಗಳು ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ.
ಭದ್ರಾವತಿ ನಾಗಮ್ಮ ಲೇಔಟ್‌ನ ರಂಗೇಗೌಡ (57) ಬಂಧಿತ. ರಿಯಲ್ ಎಸ್ಟೆಟ್ ವ್ಯವಹಾರ ಮಾಡಿಕೊಂಡಿದ್ದ ಈತ ಜೂ.13ರಂದು ಸಂಜೆ ಕೂಲಿಬ್ಲಾಕ್ ಶೆಡ್‌ನ ನಿವಾಸಿ ಅಜಯ್ ಎಂಬುವರಿಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ವ್ಯವಹಾರ ಮಾಡಿಕೊಂಡು ಹೋಗಿದ್ದ. ನೋಟಿನ ಬಗ್ಗೆ ಅನುಮಾನಗೊಂಡ ಅಜಯ್ ಪರಿಶೀಲಿಸಿದಾಗ ಅದು ನಕಲಿ ಎಂಬುದು ದೃಢವಾಗಿತ್ತು.
ನಕಲಿ ನೋಟು ನೀಡಿದ್ದ ರಂಗೇಗೌಡನ ಬಗ್ಗೆ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸ್ ಠಾಣೆಗೆ ಅಜಯ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಭದ್ರಾವತಿ ಡಿವೈಎಸ್‌ಪಿ ನಾಗರಾಜ್, ನಗರ ವೃತ್ತ ನಿರೀಕ್ಷಕ (ಪ್ರಭಾರ) ಮಂಜುನಾಥ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಠಾಣೆ ಪಿಎಸ್‌ಐ ಟಿ.ರಮೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಆರೋಪಿ ಈಗಾಗಲೇ ಹಲವೆಡೆ ನಕಲಿ ನೋಟುಗಳ ಮೂಲಕ ವ್ಯವಹಾರ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹಾಗಾಗಿ ಒಎಫ್‌ಪಿ790829 ಮತ್ತು 9ಟಿವಿ978202 ಈ ನಂಬರ್‌ನ 500 ರೂ. ಮುಖಬೆಲೆಯ ನೋಟುಗಳು ಕಂಡುಬಂದಲ್ಲಿ ಸಾರ್ವಜನಿಕರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
ಸಿಬ್ಬಂದಿ ಟಿ.ಪಿ.ಮಂಜಪ್ಪ, ನವೀನ್, ಎಚ್.ವೈ.ವಿಜಯ್, ಶ್ರೀಧರ್, ಮಾರುತಿ ಪಾಟೀಲ, ಪ್ರಸನ್ನ, ಬಿ.ಎಂ.ರಘು, ಬಿ.ಎಂ.ನಾಗರಾಜಪ್ಪ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.