ಅಧಿಕಾರಿಗಳಿಂದ ನಕಲಿ ಬೆಣ್ಣೆ -ತುಪ್ಪ ವಶಕ್ಕೆ

22 HDL 02
ಹೂವಿನಹಡಗಲಿ ಗಾಣಿಗರ ಓಣಿಯಲ್ಲಿ ನಕಲಿ ಬೆಣ್ಣೆ-ತುಪ್ಪ ಮಾರಾಟ ಮಾಡುತ್ತಿದ್ದ ಘಟಕದ ಮೇಲೆ ಅಧಿಕಾರಿಗಳು ದಾಳಿಮಾಡಿದರು. ಆಹಾರ ಸುರಕ್ಷತಾ ಅಧಿಕಾರಿ ಉದಯ್ ಮುದ್ದೇಬಿಹಾಳ, ಪುರಸಭೆ ಪರಿಸರ ಅಭಿಯಂತರ ಅಮರೇಶ, ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ ಇತರರಿದ್ದರು.
Published on

ಹೂವಿನಹಡಗಲಿ: ಪಟ್ಟಣದ ಗಾಣಿಗರ ಓಣಿ ಮನೆಯೊಂದರಲ್ಲಿ ನಕಲಿ ಬೆಣ್ಣೆ -ತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಶನಿವಾರ ದಾಳಿ ಮಾಡಿ ನಕಲಿ ಬೆಣ್ಣೆ-ತುಪ್ಪ ಹಾಗೂ ತಯಾರಿಕೆಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿ, 1ಕೇಜಿಯ 40 ಬೆಣ್ಣೆ ಚೀಲ ಮತ್ತು ಐದು ತುಪ್ಪದ ಡಬ್ಬಾ, 15 ಕೇಜಿಯ 1 ವನಸ್ಪತಿ ಡಬ್ಬಿಯನ್ನು ವಶಕ್ಕೆ ಪಡೆದಿದ್ದಾರೆ.

ಅಯೋಡಿನ್ ಸಲೂಷನ್ ಬಳಸಿ ಪರೀಕ್ಷಿಸಿದಾಗ ಮೇಲ್ನೋಟಕ್ಕೆ ಬೆಣ್ಣೆಯಲ್ಲಿ ಮಿಶ್ರಣ ಇರುವುದು ಖಚಿತವಾಗಿದೆ. ನಂತರ ಬೆಣ್ಣೆ ತಯಾರಕರನ್ನು ವಿಚಾರಿಸಿದಾಗ ಬೆಂಗಳೂರಿನಿಂದ ಬೆಣ್ಣೆ ಕಳಿಸುತ್ತಾರೆ. ಅದಕ್ಕೆ ವನಸ್ಪತಿ ಮಿಶ್ರಣ ಮಾಡಿ ಮಾರಾಟ ಮಾಡುತ್ತೇವೆ. ಪಟ್ಟಣ ಸೇರಿದಂತೆ ಹರಪನಹಳ್ಳಿ, ಗದಗ, ಬೆಳಹಟ್ಟಿ, ಮುಂಡರಗಿಯ ಡಾಬಾ ಮತ್ತು ಹೋಟಲ್‌ಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದರು.

ಅಧಿಕಾರಿಗಳು ದಾಳಿ ಮಾಡುತ್ತಿದಂತೆ ಗೋವಿಂದ ಮತ್ತು ಶಂಕರ ಪರಾರಿಯಾಗಿದ್ದಾರೆ. ಬಳ್ಳಾರಿ ತಾಲೂಕಿನ ಮೋಕಾ ಸಮೀಪದ ಬೆಣಕಲ್ ಗ್ರಾಮದ ತಿಪ್ಪೇಸ್ವಾಮಿ, ಶಿವಲಿಂಗಪ್ಪ, ಗೋವಿಂದ, ಶಂಕರ ಅವರು ಸಿಕ್ಕಿಬಿದ್ದಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿ ಉದಯ್ ಮುದ್ದೇಬಿಹಾಳ ಮಾತನಾಡಿ, ನಕಲಿ ಬೆಣ್ಣೆ ತಯಾರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಕಲಬುರಗಿಯ ಮುಖ್ಯ ಆಹಾರ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ಲಾಸ್ಟಿಕ್ ಬಳಕೆ ಮಾಡಿದ ಕಾರಣಕ್ಕೆ ಪುರಸಭೆಯಿಂದ 1 ಸಾವಿರ ದಂಡ ವಿಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net