

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ಗೆ ಬಾಂಬ್ ಹಾಕಿ ಸ್ಫೋಟಿಸುವ ಬೆದರಿಕೆಯ ಕರೆಯ ಹಿಂದೆ ಹೈದರಾಬಾದ್ನಲ್ಲಿ ಇತ್ತೀಚೆಗೆ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ನ್ಯಾಯ ಒದಗಿಸುವ ಉದ್ದೇಶ ಇರುವುದು ತಿಳಿದು ಬಂದಿದೆ.
ಜೂನ್16ರಂದು ಶಾಲೆಯ ಮೇಲ್ಗೆ ಮಧ್ಯಾಹ್ನ 1:29ಕ್ಕೆ ಹಾಗೂ ಸಂಜೆ 5:30 ಗಂಟೆಗೆ divijpprabhakaralakshmi@gmail.com ಎಂಬ ಜಿ-ಮೇಲ್ನಿಂದ ಮೆಸೇಜ್ ಬಂದಿದೆ.
ಶಾಲೆಯಲ್ಲಿ ಬಾಂಬ್ ಸ್ಫೋಟಿಸಿ ಮಕ್ಕಳು ಮೃತಪಟ್ಟರೆ ವಿದ್ಯಾರ್ಥಿಗಳ ಪಾಲಕರು ಶಾಲೆಯ ವಿರುದ್ಧ ಪ್ರತಿಭಟಿಸಲು ಪ್ರಚೋದನೆಯಾಗಬೇಕು. ಆ ಪ್ರತಿಭಟನೆ ಹೈದರಾಬಾದ್ನ ರೇಪ್ ವಿಕ್ಟಿಂಗೆ ನ್ಯಾಯ ಸಿಗುವಂತಾಗಬೇಕು ಎಂದು ಮೇಲ್ನಲ್ಲಿ ತಿಳಿಸಲಾಗಿದೆ. ಅಲ್ಲದೆ, ಬೆಂಗಳೂರು ರಾಂಪುರದ ನಿವಾಸಿ ದಿವಿಜ್ ಪಿ., ಆತನ ತಂದೆ ಪ್ರಭಾಕರ ಮತ್ತು ತಾಯಿ ಲಕ್ಷ್ಮೀ ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ಮಾಡುವ ಉದ್ದೇಶದಿಂದ ಉಡುಪಿಯ ವಿದ್ಯೋದಯ ಸ್ಕೂಲ್ಗೆ ಬಾಂಬ್ ಹಾಕುವುದಾಗಿ ಶಾಲೆಗೆ ಬಂದ ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಶಾಲೆಯ ಮೇಲ್ಗೆ ಬಂದಿದ್ದ ಈ ಸಂದೇಶವನ್ನು ಕಚೇರಿಯ ಸಹಾಯಕಿ ಶ್ವೇತಾ ತಿಳಿಸಿದ್ದು, ಶಾಲೆಯ ಆಫೀಸ್ ಇನ್ಚಾರ್ಜ್ ಶಶಿಕಾಂತ ಎಂಬವರು ಜೂನ್ 16ರಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ವಿಧ್ವಂಸಕ ವಿರೋಧಿ ತಂಡ (ಎಎಸ್ಟಿ), ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದವರು ಶಾಲೆಯನ್ನು ವಶಕ್ಕೆ ಪಡೆದು ತೀವ್ರ ಪರಿಶೀಲನೆ ನಡೆಸಿದರು. ಎಲ್ಲಿಯೂ ಸ್ಫೋಟಕ ವಸ್ತುಗಳು ಲಭಿಸಿರಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆಯ ಕರೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ತಿಳಿಸಿದ್ದರು.
ಬೆಳಗ್ಗೆ ಬಂದಿದ್ದ ಬಾಂಬ್ ಸ್ಫೋಟಿಸುವ ಇ-ಮೇಲ್ ಬೆದರಿಕೆಯ ಕರೆ ಹುಸಿಯಾಗಿದೆ ಎಂದು ಪೊಲೀಸರು ತಿಳಿಸಿದ ಬಳಿಕ, ಸಂಜೆ 5:30ಕ್ಕೆ ಮತ್ತದೇ ಜಿ-ಮೇಲ್ನಿಂದ ಇನ್ನೊಂದು ಸಂದೇಶ ಬಂದಿದೆ. ಎರಡನೇ ಮೇಲ್ನಲ್ಲಿ, ಮತ್ತೆ ಅದೇ ಹೈದರಾಬಾದ್ನಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು. ಪೊಲೀಸರು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ನಾವು ಶಾಲೆಯ ಮುಖ್ಯಸ್ಥ ಅಥವಾ ಪ್ರಾಂಶುಪಾಲರನ್ನು ತುಂಡರಿಸಿ ಕೊಲೆ ಮಾಡುತ್ತೇವೆ ಎಂದು ಮತ್ತೊಂದು ಬೆದರಿಕೆ ಹಾಕಿದ್ದಾರೆ.
ರಾಜ್ಯದ ವಿವಿಧೆಡೆಯ ಶಾಲೆಗಳಿಗೆ ಇದೇ ರೀತಿ ಹುಸಿ ಬಾಂಬ್ ಬೆದರಿಕೆಯ ಕರೆ ಮಾಡಲಾಗಿದೆ. ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಯ ಇ-ಮೇಲ್ಗೆ ಹೈದರಾಬಾದ್ನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬೆದರಿಕೆಯ ಸಂದೇಶ ರವಾನಿಸಿದ್ದಾರೆ. ಈ ವಿಚಾರದಲ್ಲಿ ಉಡುಪಿಯ ಸಾರ್ವಜನಿಕರು ಅಥವಾ ಪಾಲಕರು ಗೊಂದಲ, ಭಯಕ್ಕೆ ಒಳಗಾಗಬಾರದು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇ-ಮೇಲ್ ಮಾಡಿದವರ ಪತ್ತೆಗೆ ತನಿಖೆ ಆರಂಭಗೊಂಡಿದೆ. | ಹರಿರಾಮ್ ಶಂಕರ್. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ