ವಿದ್ಯೋದಯ ಪಬ್ಲಿಕ್​ ಸ್ಕೂಲ್​ಗೆ ಬಾಂಬ್​ ಬೆದರಿಕೆ ಕರೆ...

Vidyodaya 1
Published on

ಉಡುಪಿ ಪೊಲೀಸರಿಂದ ಪರಿಶೀಲನೆ

ದುಷ್ಕರ್ಮಿಗಳಿಂದ ಹುಸಿ ಇ-ಮೇಲ್​

ಎಸ್ಪಿ ಹರಿರಾಮ್​ ಶಂಕರ್​ ಸ್ಪಷ್ಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯಲ್ಲಿರುವ ವಿದ್ಯೋದಯ ಪಬ್ಲಿಕ್​ ಸ್ಕೂಲ್​ಗೆ ಬಾಂಬ್​ ಇಟ್ಟಿರುವುದಾಗಿ ಶಾಲೆಯ ಇ-ಮೇಲ್​ಗೆ ದುಷ್ಕರ್ಮಿಗಳು ಜೂ.16ರಂದು ಬೆಳಗ್ಗೆ ಮಾಹಿತಿ ರವಾನಿಸಿದ್ದು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು.

ಭಾರಿ ಮಳೆಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಬಂದಿರಲಿಲ್ಲ. ಆದರೆ, ಶಿಕ್ಷಕರು ಶಾಲೆಗೆ ಆಗಮಿಸಿದ್ದರು. ಶಾಲೆಯ ಇ-ಮೇಲ್​ಗೆ ಬಂದಿದ್ದ ಬಾಂಬ್​ ಬೆದರಿಕೆಯ ಹಿನ್ನೆಲೆಯಲ್ಲಿ ಮುಖ್ಯೋಧ್ಯಾಪಕರು ಕೂಡಲೇ ಜಿಲ್ಲಾ ಪೊಲೀಸ್​ ಇಲಾಖೆಗೆ ಮಾಹಿತಿ ನೀಡಿದರು.

ಪೊಲೀಸರಿಂದ ತೀವ್ರ ತಪಾಸಣೆ

ಶಾಲೆಗೆ ಕೂಡಲೇ ಆಗಮಿಸಿದ ವಿಧ್ವಂಸಕ ವಿರೋಧಿ ತಂಡ (ಎಎಸ್​ಟಿ), ಶ್ವಾನ ದಳ ಮತ್ತು ಬಾಂಬ್​ ನಿಷ್ಕ್ರಿಯ ದಳದವರು ಶಾಲೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಶಾಲೆಯ ಸಂಪೂರ್ಣ ಕಟ್ಟಡ, ಮೈದಾನದ ಸುತ್ತಮುತ್ತ ಹಾಗೂ ವರಾಂಡದಲ್ಲಿ ನಿಂತಿದ್ದ ಶಾಲಾ ವಾಹನಗಳಲ್ಲಿಯೂ ಪರಿಶೀಲನೆ ನಡೆಸಿದರು. ಆದರೆ, ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ.

ವಿದ್ಯೋದಯ ಶಾಲೆಯ ಇ-ಮೇಲ್​ ಮೂಲಕ ಶಾಲೆಯಲ್ಲಿ ಬಾಂಬ್​ ಇಡಲಾಗಿದೆ ಎಂದು ಬೆದರಿಕೆಯ ಕರೆ ನೀಡಲಾಗಿದೆ. ಮಾಹಿತಿ ತಿಳಿದ ತಕ್ಷಣ ಇಡೀ ಶಾಲೆಯಲ್ಲಿ ಸೂಕ್ತ ಪರಿಶೀಲನೆ ಮಾಡಿದ್ದೇವೆ. ಅದೊಂದು ಹುಸಿ ಇ-ಮೇಲ್​ ಬೆದರಿಕೆಯ ಕರೆ ಆಗಿರುವುದು ಸ್ಪಷ್ಟವಾಗಿದ್ದು, ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗಿದೆ. ಈ ಕೃತ್ಯದ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. | ಹರಿರಾಮ್​ ಶಂಕರ್​. ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net