

ಮಂಗಳೂರು: ವ್ಯಕ್ತಿಯೋರ್ವ ನಕಲಿ ಆಧಾರ್‌ಕಾರ್ಡ್ ಬಳಸಿ ದ.ಕ, ಉಡುಪಿ ಮತ್ತು ಬೆಂಗಳೂರಿನಲ್ಲಿ ಸುಮಾರು 14 ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಶ್ಯೂರಿಟಿ ನೀಡಿರುವುದು ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆ ಕಳತ್ತೂರು ಚಂದ್ರನಗರದ ಉಮರಬ್ಬ ಮೊಹಿನುದ್ದೀನ್(50) ಕಳೆದ ಅ.30ರಂದು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1(ಪೊಕ್ಸೋ)ದಲ್ಲಿ ವಿಚಾರಣೆಯಲ್ಲಿ ಪ್ರಕರಣದ ಆರೋಪಿಗಳಾದ ರಫೀಕ, ಸಾರಮ್ಮ ಮತ್ತು ಆಯಿಷಾಬಾನುಗೆ ಜಾಮೀನು ಶ್ಯೂರಿಟಿ ನೀಡಿದ್ದ. 2022ರ ಜು.26ರಂದು ಈತ ಬೇರೆ ಸಂಖ್ಯೆಯ ಆಧಾರ್ ಕಾರ್ಡ್ ಮೂಲಕ ಜಾಮೀನು ಶ್ಯೂರಿಟಿ ನೀಡಿದ್ದ. ಈತನ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಈತ ವಿವಿಧೆಡೆ ಇದೇ ರೀತಿ 14 ಪ್ರಕರಣಗಳಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಜಾಮೀನು ಶ್ಯೂರಿಟಿ ನೀಡಿರುವುದು ಪತ್ತೆಯಾಗಿದೆ.
ಇದೇ ರೀತಿ ಮಂಗಳೂರು ಕಸಬಾ ಬೆಂಗ್ರೆಯ ಮೊಯಿದ್ದೀನ್ ನಾಸೀರ್(46) ನ.6ರಂದು ಜಾಮೀನು ಶ್ಯೂರಿಟಿ ನೀಡಿದ್ದು ಈತನ ದಾಖಲೆಗಳನ್ನು ಪರಿಶೀಲಿಸಿದಾಗ ಬೇರೆ ಬೇರೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ 5 ಮಂದಿಗೆ ನಕಲಿ ಆಧಾರ್ ಕಾರ್ಡ್ ಮತ್ತು ನಕಲಿ ಆರ್‌ಟಿಸಿ ಬಳಸಿ ಶ್ಯೂರಿಟಿದಾರನಾಗಿರುವುದು ಕಂಡುಬಂದಿದೆ. ಈ ಬಗ್ಗೆ ಮಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.