

ಬ್ಯಾಡಗಿ: ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬ, ಹರಿದಿನ, ಜಾತ್ರೆ ಉತ್ಸವಗಳ ಆಚರಣೆ ಹಿಂದೆ ವಿಶಿಷ್ಟವಾದ ಪರಂಪರೆ ಇದ್ದು, ಆಯಾ ಕಾಲಘಟ್ಟಗಳಿಗೆ ಸಂಬಂಧಿಸಿದಂತೆ ಮಹತ್ವದ ಸಂದೇಶ ಬೀರಿವೆ ಎಂದು ನಿವೃತ್ತ ಉಪನ್ಯಾಸಕ ಡಾ.ಪ್ರೇಮಾನಂದ ಲಕ್ಕಣ್ಣನವರ ಹೇಳಿದರು.
ಲಿಂ. ಗುಬ್ಬಿ ನಂಜುಂಡೇಶ್ವರ ಪೂಜ್ಯರ ಪುಣ್ಯಾರಾಧನೆ ಅಂಗವಾಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಏರ್ಪಡಿಸಿದ್ದ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಿನ ಯಾವುದೋ ಸ್ಥಳದಲ್ಲಿ ಜನಿಸಿ ಜಿಲ್ಲೆಯ ವಿವಿಧ ಕ್ಷೇತ್ರ, ಗ್ರಾಮಗಳಲ್ಲಿ ಪ್ರಭಾವಶಾಲಿ ಪವಾಡ ಬೀರಿದ ಲಿಂ.ಗುಬ್ಬಿನಂಜುಂಡೇಶ್ವರ ಶ್ರೀಗಳ ಅಧ್ಯಾತ್ಮ ಸಾಧನೆ ಎಲ್ಲಕ್ಕಿಂತಲೂ ಮೀರಿದೆ. ಅವರನ್ನು ವಾಕ್ಸಿದ್ಧಿ ಪುರುಷರೆಂದು ನಂಬಿದ ಸಾವಿರಾರು ಭಕ್ತರು ಅವರಲ್ಲಿ ದೈವವನ್ನು ಕಂಡಿದ್ದರು. ಲಿಂ.ಗುರುಗಳ ಜತೆ ಮಾತನಾಡಲು ಭಕ್ತರು ಅಂಜುತ್ತಿದ್ದರು. ಕಾರಣ ಅವರು ಏನಾದರೂ ನುಡಿದರೆ ಹುಸಿಯಾಗುತ್ತಿರಲಿಲ್ಲ. ಇಂತಹ ಮಹಾತ್ಮರು ಹಾನಗಲ್ಲ ತಾಲೂಕಿನ ಹೊಂಕಣ, ಹಿರೇಹಳ್ಳಿ, ಮೋಟೆಬೆನ್ನೂರು ಸೇರಿ ಜಿಲ್ಲೆ ಹಾಗೂ ಹೊರಜಿಲ್ಲೆಗಳಲ್ಲಿ ಅತ್ಯಂತ ಶ್ರೇಷ್ಠ ಧರ್ಮಜಾಗೃತಿ ಮೂಡಿಸಿದ್ದರು. ಶ್ರೀಗಳಿಗೆ ಭಕ್ತರ ಸಂಖ್ಯೆ ದೊಡ್ಡಮಟ್ಟದಲ್ಲಿದ್ದು, ಅಜ್ಜಾರ ಒಂದು ಮಠವಾದರೂ ಕಟ್ಟಿಸಿರಿ ಎಂದು ಹೇಳಿದಾಗ ಎಂತಹ ಅದ್ಭುತ ವಾಣಿ ಹೇಳಿದ್ದರೆಂದರೆ, ‘ಹೇ ಹುಚ್ಚ ನಾನಿರುವಾಗ ಮಠ ಯಾಕೋ, ಘಠ ಹ್ವಾದ ಮ್ಯಾಲ ಮಠ ತಾನ ಅಕ್ಕಾತಿ’ ಎಂದಿರುವ ಮಾತು ಇಂದಿಗೂ ಸತ್ಯವಾಗಿದೆ ಎಂದು ಶ್ರೀಗಳ ಕೆಲ ಪವಾಡಗಳನ್ನು ಭಕ್ತರಿಗೆ ತಿಳಿಸಿದರು.
ದೇವಸ್ಥಾನ ಉತ್ಸವ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಬಳ್ಳಾರಿ, ವಿಜಯ ಬಳ್ಳಾರಿ, ಪ್ರವೀಣ ಬಳ್ಳಾರಿ, ವಿ.ಸಿ. ಹಾವೇರಿಮಠ, ಎ.ಟಿ. ಪೀಠದ, ನಿಂಗಪ್ಪ ಅಗಡಿ, ಶಿವಬಸಪ್ಪ ಕುಳೇನೂರು, ಬಸವರಾಜ ಬಳ್ಳಾರಿ, ಇತರರಿದ್ದರು.