ಜಾತ್ರೆ ವೇಳೆ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಸೂಕ್ತ ಕ್ರಮ, ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಬಸವರಾಜ ದಢೇಸುಗೂರು ಎಚ್ಚರಿಕೆ

120220 Kanakagiri Jatre Meeting
Published on

ಕನಕಗಿರಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನದ ಮಹಾ ರಥೋತ್ಸವವು ಮಾ.16 ರಂದು ನಡೆಯಲಿದ್ದು, ಜಾತ್ರೆಗೆ ಬಂದ ಲಕ್ಷಾಂತರ ಭಕ್ತರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆಯನ್ನು ಎಲ್ಲ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

ಕನಕಾಚಲ ದೇವಸ್ಥಾನದ ಒಳಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರೆಯು ಮಾ.7 ರಿಂದ ಮಾ.20ರ ವರೆಗೆ ನಡೆಯಲಿದ್ದು, ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಪಟ್ಟಣದ ನಿವಾಸಿಗಳು ಹಾಗೂ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ವಾಹನ ನಿಲುಗಡೆ ಸ್ಥಳ, ಸಚ್ಚಿದಾನಂದ ಅವದೂತರ ಮಠದಲ್ಲಿ ದಾಸೋಹದ ವ್ಯವಸ್ಥೆ, ಪುಷ್ಕರಣಿಯ ಹತ್ತಿರ ತಲೆ ಮಂಡಿ ಕೊಟ್ಟವರಿಗೆ ನೀರಿನ ವ್ಯವಸ್ಥೆ, ಬರುವ ಲಕ್ಷಾಂತರ ಭಕ್ತರಿಗೆ ಕುಡಿಯುವ ನೀರು, ಬಸ್ ಸೌಕರ್ಯ, ರಾಜಬೀದಿಯ ಸ್ವಚ್ಛತಾ ಕಾರ್ಯ, ಅಗ್ನಿ ಶಾಮಕ ವಾಹನ ವ್ಯವಸ್ಥೆ, ಸಮರ್ಪಕ ವಿದ್ಯುತ್ ಪೂರೈಕೆ, ಆರೋಗ್ಯ ಇಲಾಖೆಯಿಂದ ಸೂಕ್ತ ವ್ಯವಸ್ಥೆ, ದೇಗುಲದ ಗೋಪುರಗಳಿಗೆ ಸುಣ್ಣ-ಬಣ್ಣ ಹಾಗೂ ವಿದ್ಯುತ್ ಅಲಂಕಾರ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ದೇವಸ್ಥಾನದ ಆಡಳಿತಾಧಿಕಾರಿ ಸಿ.ಎಸ್.ಚಂದ್ರಮೌಳಿ, ದೇವಸ್ಥಾನದ ಇಒ ವಿಶ್ವನಾಥ, ತಹಸೀಲ್ದಾರ್ ರವಿ ಅಂಗಡಿ, ಗಂಗಾವತಿ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ಸಿಪಿಐ ಸುರೇಶ ತಳವಾರ, ಕನಕಗಿರಿ ತಾಪಂ ಇಒ ಅರುಣಕುಮಾರ, ಪಪಂ ಮುಖ್ಯಾಧಿಕಾರಿ ತಿರುಮಲಾದೇವಿ, ಪಿಎಸ್‌ಐ ಪ್ರಶಾಂತ, ಸಿಡಿಪಿಒ ಶ್ವೇತಾ, ಪಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net