ಧರ್ಮದ ಉಳಿವಿಗೆ ಜಾತ್ರೆ, ಧಾರ್ಮಿಕ ಕಾರ್ಯ ಅಗತ್ಯ

nrp 1 A..
Published on

ಎನ್.ಆರ್.ಪುರ: ಧರ್ಮ ಉಳಿದರೆ, ದೇಶ ಉಳಿಯುತ್ತದೆ. ಧರ್ಮ ಉಳಿಯಬೇಕಾದರೆ ದೇವರ ಜಾತ್ರೆಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಚಿತ್ತಾಪುರದ ಶ್ರೀ ನಾರಾಯಣಗುರು ಧರ್ಮ ಪೀಠದ ಡಾ.ಶ್ರೀ ಪ್ರಣವಾವನಂದ ಸ್ವಾಮೀಜಿ ಹೇಳಿದರು.

ಶ್ರೀಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ದೇಶದ ರಕ್ಷಣೆ ಮಾಡುವ ಸೈನಿಕರು ಯಾವುದೇ ಧರ್ಮ, ಜಾತಿ ಬೇಧವಿಲ್ಲದೆ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಅಂತಹ ಸೈನಿಕರಿಗೆ ಪರಾಶಕ್ತಿಯಾದ ಮಾರಿಕಾಂಬೆ ದೇವಿ ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸಿದರು.

ಇಂದು ಮಠ, ಮಾನ್ಯಗಳಿಂದ ಜನರು ದೂರವಾಗುತ್ತಿದ್ದಾರೆ. ಧರ್ಮದ ಉಳಿವಿಗಾಗಿ ಸಂಘಟಿತರಾಗುವ ಬಗ್ಗೆ ಚಿಂತನೆ ನಡೆಸಬೇಕಿದೆ. ನಾವು ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಿದರೆ ಮಾತ್ರ ನಮಗೆ ಒಳಿತಾಗುತ್ತದೆ. ನಾವು ನೀಲಗಿರಿ ಮರವಾಗದೆ, ಬಾಳೆ ಗಿಡವಾಗಬೇಕು. ನೀಲಗಿರಿ ಮರ ತನ್ನ ಬುಡದಲ್ಲಿ ಒಂದು ಹುಲ್ಲು ಕಡ್ಡಿಯನ್ನೂ ಸಹ ಬೆಳೆಯಲು ಬಿಡುವುದಿಲ್ಲ, ಆದರೆ ಬಾಳೆ ಗಿಡ ತನ್ನ ಬುಡದಲ್ಲಿ ನಾಲ್ಕೈದು ಗಿಡಗಳನ್ನು ಬೆಳೆಸುತ್ತದೆ. ಹಾಗೆಯೇ ಕಲ್ಮಶ ತುಂಬಿದ ಮನುಷ್ಯನು ಇತರರ ಏಳ್ಗೆ ಸಹಿಸಲಾರನು. ನೀವು ಮಾಡದ ತಪ್ಪುಗಳನ್ನು ಭಗವಂತನ ಮೇಲೆ ಹೊರಿಸಬಾರದು, ತಪ್ಪು ಮಾಡಿ ದೇವರಲ್ಲಿ ನನಗೆ ಒಳ್ಳೆಯದನ್ನು ಮಾಡು ಎಂದು ಬೇಡಿಕೊಳ್ಳುವುದು ಸರಿಯಲ್ಲ ಎಂದರು.

ಪಪಂ ಅಧ್ಯಕ್ಷೆ ಜುಬೇದಾ, ಮಡಬೂರು ಶ್ರೀ ದಾನಿವಾಸ ದುರ್ಗಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಸಿ.ದಿವಾಕರ, ಮೇದರಬೀದಿ ಶ್ರೀ ಅಂತರಘಟ್ಟಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರವೀಣ, ಅಂಬೇಡ್ಕರ್ ನಗರದ ಶ್ರೀ ಮುತ್ತಿನಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ರವಿಶಂಕರ್, ಹಳೇಪೇಟೆ ಶ್ರೀ ಗುತ್ತತ್ಯಮ್ಮ ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಚ್.ಎನ್.ರವಿಶಂಕರ್, ಚೌಡಮ್ಮ ದೇವಸ್ಥಾನ ಸಮಿತಿ ಧರ್ಮದರ್ಶಿ ಪಿ.ಮಂಜುನಾಥ್ ಪೆರುಮಾಳ್, ಜಾತ್ರಾ ಸಮಿತಿ ಕಾರ್ಯದರ್ಶಿಗಳಾದ ಎನ್.ಎಂ.ಕಾರ್ತಿಕ್, ಖಜಾಂಚಿ ಆರ್.ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಪಿ.ಆರ್.ಸುಕುಮಾರ್, ಶ್ರೀಧರಪಾನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net