

ಲಕ್ಕೂರು: ಮಾಲೂರು ತಾಲೂಕು ಲಕ್ಕೂರು ಹೋಬಳಿಯ ಚಿಕ್ಕತಿರುಪತಿಯ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರೋತ್ಸವ ಅಂಗವಾಗಿ ಏ.4 ರಿಂದ 13 ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಆಯೋಜಿಸಲಾಗಿದೆ.
ಏ.4ರಂದು ಅಂಕುರಾರ್ಪಣೆ, ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಏ.5 ರಂದು ಸಿಂಹವಾಹನೋತ್ಸವ, ಏ.6ರಂದು ಹನುಮಂತ ವಾಹನೋತ್ಸವ, ಏ.7ರಂದು ಶ್ರೇಷ್ಠವಾಹನೋತ್ಸವ, ರಾತ್ರಿ ವೈರುಮುಡಿ, ಏ.8 ರಂದು ಕಾಶಿಯಾತ್ರೆ, ಕಲ್ಯಾಣೋತ್ಸವ, ಗರುಡೋತ್ಸವ, ಏ.9ರಂದು ಗಜೇಂದ್ರ ಮೋಕ್ಷ, ಗಜವಾಹನೋತ್ಸವ ನಡೆಯಲಿದೆ.
ಏ.10 ರಂದು ಪುಬ್ಬಾ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ಜರುಗಲಿದ್ದು, ಆವರಣದಲ್ಲಿ ಆಸ್ಥಾನ ಪೂಜೆ, ಮಂಟಪೋತ್ಸವ, ಚಿತ್ರಗೋಪುರೋತ್ಸವ ನಡೆಯಲಿದೆ. ಏ.11ರಂದು ಅಶ್ವವಾಹನೋತ್ಸವ, ಶಯನೋತ್ಸವ, ಏ.12ರಂದು ವಸಂತೋತ್ಸವ, ರಾತ್ರಿ ಆರ್ಯ ಈಡಿಗರ ಸಂಘದಿಂದ ಪಲ್ಲಕ್ಕಿ ಉತ್ಸವ, ಏ.13ರಂದು ಹಂಸ ವಾಹನೋತ್ಸವ, ರಾತ್ರಿ ಪುಷ್ಪ ವಾಹನೋತ್ಸವ ನೆರವೇರಲಿದೆ.
ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಎಂ.ಮಲ್ಲೇಶ್ಬಾಬು, ಶಾಸಕರಾದ ಕೆ.ವೈನಂಜೇಗೌಡ, ಚಿದಾನಂದಗೌಡ, ಅನಿಲ್ಕುಮಾರ್, ಡಿ.ಟಿ.ಶ್ರೀನಿವಾಸ್, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪ ವಿಭಾಗಾಧಿಕಾರಿ ಡಾ.ಎಚ್.ಸಿ.ಮೈತ್ರಿ, ತಹಸೀಲ್ದಾರ್ ರೂಪಾ ಭಾಗವಹಿಸಲಿದ್ದಾರೆ.
ಗರುಡವಾಹನೋತ್ಸವ ಅದ್ದೂರಿ
ಯುಗಾದಿ ಹಬ್ಬದ ಪ್ರಯುಕ್ತ ಚಿಕ್ಕತಿರುಪತಿ ಗ್ರಾಮದ ಶ್ರೀ ವೆಂಕಟರಮಣಸ್ವಾಮಿ ದೇಗುಲದಲ್ಲಿ 5 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಗೋವಿಂದ ಸ್ಮರಣೆ ಮಾಡಿ ದರ್ಶನ ಪಡೆದರು.
ಏ.10ರಂದು ನೆರವೇರಲಿರುವ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಭಾನುವಾರ ರಥದ ಚಕ್ರಗಳನ್ನು ಜೋಡಿಸಿ ಪೂಜೆ ಸಲ್ಲಿಸಿ, ನಂತರ ಸಿಪಿಐ ಹರೀಶ್ರೆಡ್ಡಿ ಅವರು ಗರುಡ ವಾಹನೋತ್ಸವಕ್ಕೆ ಪೂಜೆ ಸಲ್ಲಿಸಿದರು.
ನಂತರ ಪಂಚಾಂಗ ಶ್ರವಣ ಮಾಡಿ ವಾರ್ಷಿಕ ರಾಶಿಗಳ ಗ್ರಹಚಾರ ಫಲ ಹಾಗೂ ಆಯವ್ಯಯಗಳನ್ನು ಭಕ್ತಾಧಿಗಳಿಗೆ ತಿಳಿಸಿ ಮಹಾ ಮಂಗಳಾರತಿ ಮಾಡಲಾಯಿತು.
ದೇಗುಲದ ಇಒ ಟಿ.ಸೆಲ್ವಮಣಿ, ಸಮಿತಿಯ ಸದಸ್ಯರಾದ ಕೃಷ್ಣಾರೆಡ್ಡಿ, ಶ್ರೀನಿವಾಸ್, ಕೃಷ್ಣಮೂರ್ತಿ, ವೆಂಕಟೇಶ್, ಭಾಗ್ಯಮ್ಮ, ತೇಜಸ್ವಿನಿ, ಮಾಜಿ ಅಧ್ಯಕ್ಷ ಟಿ.ಆರ್.ವೆಂಕಟೇಶ್ಗೌಡ, ಮಾಜಿ ಸದಸ್ಯ ಸುರೇಶ್ಬಾಬು, ಶ್ರೀನಾಥ್ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಟಿ.ಸೆಲ್ವಮಣಿ, ಪ್ರಧಾನ ಅರ್ಚಕರಾದ ಎಸ್.ರವಿ, ಎನ್.ಶ್ರೀಧರ್, ಜಿ.ಎನ್.ಗೋಪಾಲಕೃಷ್ಣ ಭಾರದ್ವಾಜ್ ಇದ್ದರು.