

ಹಿರೀಸಾವೆ: ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಡಿ.4 ರಂದು ಪ್ರಾರಂಭಗೊಂಡಿದ್ದ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ವಿಶ್ವನಾಥಸ್ವಾಮಿಯ ಜಾತ್ರಾ ಮಹೋತ್ಸವ ಸೋಮವಾರ ಸಮಾಪ್ತಿಗೊಂಡಿತು.
ಡಿ.4 ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದು, ಮರುನಿರ್ಮಾಣಗೊಂಡಿರುವ ದೇಗುಲಗಳ ಲೋಕಾರ್ಪಣೆ ಕಾರ್ಯ ನೆರವೇರಿಸಿದರು.
ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಪೂಜಾ ವಿದಿವಿಧಾನಗಳನ್ನು ಕೈಗೊಂಡಿದ್ದು, ಶ್ರೀಕ್ಷೇತ್ರ ಕುಂದೂರು ಮಠದ ಈ ಹಿಂದಿನ ಎಲ್ಲ ಪೀಠಾಧ್ಯಕ್ಷರ ಪುಣ್ಯರಾಧನೆ ಕಾರ್ಯ ನೆರೆವೇರಿತು.
ಡಿಸೆಂಬರ್ 4ರಿಂದ ಪ್ರತಿದಿನ ಧಾರ್ಮಿಕ ವಿಧಿ ವಿಧಾನಗಳ ಜತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮಗಳಲ್ಲಿ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥಸ್ವಾಮೀಜಿ, ಶಾಸಕ ಎಚ್.ಡಿ.ರೇವಣ್ಣ, ಸಂಸದ ಶ್ರೇಯಸ್ ಎಂ.ಪಟೇಲ್, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ, ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ.ಮದನ್ ಗೌಡ ಇತರರು ಇದ್ದರು.