ಜನಹಿತ ಕಾಪಾಡುವಲ್ಲಿ ವಿಫಲ

15hukkeri1-1.jpg
Published on

ಹುಕ್ಕೇರಿ: ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಪಟ್ಟಣದ ಮಿನಿ ವಿಧಾನಸೌಧ ಬಳಿಯ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಆರೋಪಿಸಿದರು.

ಹುಕ್ಕೇರಿ ಪಟ್ಟಣದ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಮಂಜುಳಾ ನಾಯಕ, ಪ್ರವೀಣ ಕಟ್ಟಿ, ಪ್ರಭಾವತಿ ಪಾಟೀಲ, ಮಹಾಂತೇಶ ಬಸ್ಸಾಪೂರಿ, ರಮೇಶ ಛಾಯಾಗೋಳ, ಕರೆಪ್ಪ ಗುಡೆನ್ನವರ, ರಮೇಶ ಹುಂಜಿ ಇತರರಿದ್ದರು.
ಹುಕ್ಕೇರಿ ಪಟ್ಟಣದ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಮಂಜುಳಾ ನಾಯಕ, ಪ್ರವೀಣ ಕಟ್ಟಿ, ಪ್ರಭಾವತಿ ಪಾಟೀಲ, ಮಹಾಂತೇಶ ಬಸ್ಸಾಪೂರಿ, ರಮೇಶ ಛಾಯಾಗೋಳ, ಕರೆಪ್ಪ ಗುಡೆನ್ನವರ, ರಮೇಶ ಹುಂಜಿ ಇತರರಿದ್ದರು.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಸಮುದಾಯದ ಕಾಲನಿಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು. ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರು, ಸಮುದಾಯ ಭವನ ನಿರ್ಮಿಸಬೇಕು. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಹುತೇಕ ಹಳ್ಳಿಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆದಿದ್ದು, ಪೊಲೀಸ್ ಮತ್ತು ಅಬಕಾರಿ ಇಲಾಖೆಯವರು ಶಾಮೀಲಾಗಿದ್ದಾರೆ ಎಂದೂ ಆರೋಪಿಸಿದರು.

ಗಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಜಮೆ ಮಾಡಬೇಕು. ಪಡಿತರ ಚೀಟಿ ತಿದ್ದುಪಡಿ ವೇಳೆ ಆಗುತ್ತಿರುವ ಸರ್ವರ್ ಸಮಸ್ಯೆ ಸರಿಪಡಿಸಬೇಕು. ಶಕ್ತಿ ಯೋಜನೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅಗತ್ಯ ಬಸ್‌ಗಳ ಸೇವೆ ಒದಗಿಸಬೇಕು. ರೈತರಿಗೆ ಬೀಜ, ಗೊಬ್ಬರ ಪೂರೈಸಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಯೋಜನೆಯಡಿ ಸಾಲ ನೀಡಲು ಬಹುತೇಕ ಬ್ಯಾಂಕ್ ಅಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವಿವಿಧ ಯೋಜನೆಗಳ ಸೌಲಭ್ಯದಿಂದ ದಲಿತರು ವಂಚಿತರಾಗುತ್ತಿದ್ದಾರೆ. ಮೀಸಲಾತಿ ಅನ್ವಯ ಅರ್ಹ ದಲಿತ ಗುತ್ತಿಗೆದಾರರಿಗೆ ಸರ್ಕಾರಿ ಕಾಮಗಾರಿಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ತಮಟೆ ಬಾರಿಸಿ ಪ್ರತಿಭಟನೆ : ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ಜಿಲ್ಲಾಡಳಿತ ಮಂಜೂರು ಮಾಡಿದ ಸ್ಮಶಾನ ಭೂಮಿಯ ಹದ್ದು ಬಸ್ತ್ ಗುರುತಿಸುವಲ್ಲಿ ತಾಲೂಕಾಡಳಿತ ನಿರ್ಲಕ್ಷಿಸಿದೆ ಎಂದು ದಲಿತ ಮುಖಂಡರು ತಮಟೆ ಬಾರಿಸಿ ಪ್ರತಿಭಟಿಸಿದರು.

ತಹಸೀಲ್ದಾರ್ ಮಂಜುಳಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಪ್ರವೀಣ ಕಟ್ಟಿ, ಬಿಇಒ ಪ್ರಭಾವತಿ ಪಾಟೀಲ, ಸಿಪಿಐಗಳಾದ ಮಹಾಂತೇಶ ಬಸ್ಸಾಪುರಿ, ರಮೇಶ ಛಾಯಾಗೋಳ, ಶಿವಶರಣ ಆವಜಿ, ಪಿಎಸ್‌ಐ ಅಭಿಜಿತ ಅಕ್ಕತಂಗೇರಹಾಳ, ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಕರೆಪ್ಪ ಗುಡೆನ್ನವರ, ವಿಭಾಗೀಯ ಸದಸ್ಯ ರಮೇಶ ಹುಂಜಿ, ಮಾಜಿ ಸದಸ್ಯ ಉದಯ ಹುಕ್ಕೇರಿ, ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ, ದಿಲೀಪ ಹೊಸಮನಿ, ವಿಕ್ರಮ ಕರನಿಂಗ, ಬಸವರಾಜ ತಳವಾರ, ಬಿ.ಕೆ.ಸದಾಶಿವ, ರಮೇಶ ತಳವಾರ, ಅಪ್ಪಣ್ಣ ಖಾತೇದಾರ, ಕೆಂಪಣ್ಣ ಶಿರಹಟ್ಟಿ, ಕೆ.ವೆಂಕಟೇಶ, ಪ್ರಕಾಶ ಮೈಲಾಖೆ, ವಿಠ್ಠಲ ಮಾದರ, ಮಂಜು ಪಡದಾರ, ಚಿದಾನಂದ ಹಿರೇಕೆಂಚನವರ, ಮಂಜು ಮರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net