

ಹುಬ್ಬಳ್ಳಿ : ಸೂಕ್ತ ರೂಪುರೇಷೆಗಳು ಇಲ್ಲದೆ, ಜನರನ್ನು ನಿಯಂತ್ರಣ ಮಾಡಲು ಸರಿಯಾದಂತಹ ಕಾರ್ಯಯೋಜನೆಗಳನ್ನ ರೂಪಿಸದೆ ಬೆಂಗಳೂರಿನಲ್ಲಿ ವಿಜಯೋತ್ಸವದ ಸಂಭ್ರಮಾಚರಣೆ ಹಮ್ಮಿಕೊಂಡ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಾಗದೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ದೂರಿದ್ದಾರೆ.
ಅನೇಕ ಮುಗ್ಧ ಜೀವಗಳು ಕಾಲ್ತುಳಿತಕ್ಕೆ ಬಲಿಯಾಗಿವೆ. ಇದು ಕೇವಲ ಅಪಘಾತವಲ್ಲ, ಇದು ಕಾಂಗ್ರೆಸ್ ಸರ್ಕಾರದ ರಾಜಕೀಯ ಲಾಭಕ್ಕಾಗಿ ಆರ್ಸಿಬಿ ಗೆಲುವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನದ ದುಷ್ಪರಿಣಾಮವಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಲಕ್ಷಾಂತರ ಜನ ಬರುತ್ತಾರೆ ಎಂಬ ನಿರೀಕ್ಷೆ ಇದ್ದರು ಸಹ ಸರಿಯಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ ವಹಿಸಿರುವುದು ಇದಕ್ಕೆ ಕಾರಣ. ಅದಕ್ಕೂ ಮಿಗಿಲಾಗಿ ತುರ್ತು ಸೇವೆಗಳನ್ನು ನಿಯೋಜನೆ ಮಾಡದೆ ಮೈಮರೆತ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಎಲ್ಲ ಸಾವು, ನೋವುಗಳಿಗೆ ನೇರ ಕಾರಣ ಎಂದು ಜಗದೀಶ ಶೆಟ್ಟರ್ ಅವರು ಪ್ರಕಟಣೆ ಮೂಲಕ ದೂರಿದ್ದಾರೆ.