ಅತಿವೃಷ್ಟಿ ಪೀಡಿತವೆಂದು ಘೋಷಿಸಲು ವಿಫಲ

ARUNKUMAr
Published on

ಎನ್.ಆರ್.ಪುರ: ಅತಿವೃಷ್ಟಿಗೆ ಅಡಕೆ, ಕಾಫಿ, ಕಾಳುಮೆಣಸು ಸೇರಿದಂತೆ ಹಲವು ಬೆಳೆಗಳು ಹಾಳಾಗಿದ್ದರೂ ಶೃಂಗೇರಿ ಕ್ಷೇತ್ರದ 3 ತಾಲೂಕುಗಳನ್ನು ಅತಿವೃಷ್ಟಿ ಪೀಡಿತ ಎಂದು ಘೋಷಣೆ ಮಾಡಲು ಶಾಸಕ ಟಿ.ಡಿ.ರಾಜೇಗೌಡ ವಿಫಲರಾಗಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಆರೋಪಿಸಿದರು.

ವನ್ಯಜೀವಿ ಸಪ್ತಾಹದ ಕಾರ್ಯಕ್ರಮವೊಂದರಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶಾಸಕ ಟಿ.ಡಿ.ರಾಜೇಗೌಡ ಅವರು ನೂರಾರು ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಅವರು ಒತ್ತುವರಿ ಅರಣ್ಯ ಭೂಮಿ ತೆರವುಗೊಳಿಸಿದ್ದಾರೆ ಎಂದು ಅರಣ್ಯ ಮಂತ್ರಿಗಳೇ ಹೇಳಿರುವುದರಿಂದ ಶಾಸಕರು ರೈತರ ಪರವಾಗಿ ಇಲ್ಲ ಎಂಬುದು ಸಾಬೀತಾಗಿದೆ. ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಅಂಚೆ ಮತಗಳ ಮರು ಎಣಿಕೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿ ಆದೇಶಿಸಿದೆ. ಇದರಿಂದ ಟಿ.ಡಿ.ರಾಜೇಗೌಡ ಅವರಿಗೆ ಹಿನ್ನಡೆ ಆಗಿದೆ. ಆದ್ದರಿಂದ ಅವರು ಗಲಿಬಿಲಿಗೊಂಡು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ಬಿಪಿಎಲ್ ಕಾರ್ಡ್‌ಗೆ ಕೆಲವು ನಿಯಮ ಜಾರಿಗೊಳಿಸಿರುವುದು ಸರಿಯಲ್ಲ. ಎಲ್ಲ ಕೂಲಿ ಕಾರ್ಮಿಕರು ಕಾರು, ಬೈಕ್ ಖರೀದಿಸುತ್ತಿದ್ದಾರೆ. ಅವರೆಲ್ಲ ಶ್ರೀಮಂತರಲ್ಲ. ಅವರ ಕೆಲಸಕ್ಕೆ ವಾಹನಗಳು ಅಗತ್ಯವಾಗಿವೆ. ಬಿಪಿಎಲ್ ಕಾರ್ಡ್‌ಗೆ ಹೊಸ ನಿಯಮ ಹಿಂಪಡೆಯಬೇಕು. 25 ಎಕರೆವರೆಗೆ ಭೂಮಿ ಲೀಸ್ ಮೇಲೆ ಕೊಡುವ ಕಾನೂನನ್ನು ಸರ್ಕಾರ ಜಾರಿಗೆ ತರಲಿ. ಸೆಕ್ಷನ್ 4 ನೋಟಿಫಿಕೇಷನ್ ಗೆ ಸಂಬಂಧಪಟ್ಟಂತೆ ಕಡೂರಿನಲ್ಲಿ ಮಾತ್ರ ಫಾರೆಸ್ಟ್ ಸೆಟಲ್‌ಮೆಂಟ್ ಆಫೀಸರ್ ಇದ್ದಾರೆ. ಶೃಂಗೇರಿ ಕ್ಷೇತ್ರಕ್ಕೂ ಒಬ್ಬ ಫಾರೆಸ್ಟ್ ಸೆಟ್ಲ್‌ಮೆಂಟ್ ಆಫೀಸರ್ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಎಚ್.ಡಿ.ಲೋಕೇಶ್, ಎನ್.ಎಂ.ಕಾಂತರಾಜ್, ಕೆಸವಿ ಮಂಜುನಾಥ್, ಸೈಯದ್‌ಫರ್ವೀಜ್, ಸುರಭಿ ರಾಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net