ಜಂತು ಹುಳು ಸಮಸ್ಯೆಯಿಂದ ಗರ್ಭ ಕಟ್ಟುವಿಕೆಯಲ್ಲಿ ಪೈಫಲ್ಯ

10 nrp 2
Published on

ಎನ್.ಆರ್.ಪುರ: ಜಾನುವಾರುಗಳಿಗೆ ಜಂತುಹುಳು ಸಮಸ್ಯೆಯಿಂದ ರಾಸುಗಳಲ್ಲಿ ಗರ್ಭಕಟ್ಟುವಿಕೆಯಲ್ಲಿ ವೈಫಲ್ಯ ಕಂಡು ಬರುತ್ತಿದೆ ಎಂದು ಎನ್.ಆರ್.ಪುರ ಪಶು ಆಸ್ಪತ್ರೆ ಪಶು ವೈದ್ಯಾಧಿಕಾರಿ ಡಾ.ರೇಣುಕ ಪ್ರಸಾದ್ ಹೇಳಿದರು.

ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೊರಲಕೊಪ್ಪದಲ್ಲಿ ಮುತ್ತಿನಕೊಪ್ಪ ಪಶು ಆಸ್ಪತ್ರೆ ಆಶ್ರಯದಲ್ಲಿ ಗ್ರಾಪಂ ಸದಸ್ಯ ನಾಗೇಂದ್ರ ಮನೆ ಅಂಗಳದಲ್ಲಿ ನಡೆದ ಬರುಡು ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿಶೇಷವಾಗಿ ಎನ್.ಆರ್.ಪುರ ತಾಲೂಕಿನಲ್ಲಿ ಭದ್ರಾ ಹಿನ್ನೀರು ಇರುವುದರಿಂದ ಇಲ್ಲಿ ಲಿವರ್ ಪ್ಲೂಕ್ಸ್ ಎಂಬ ಜಂತು ಹುಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಕಾಲ, ಕಾಲಕ್ಕೆ ಜಾನುವಾರುಗಳಿಗೆ ಜಂತು ಹುಳು ಔಷಧಿಯನ್ನು ನೀಡಬೇಕು.

ಜಾನುವಾರುಗಳಲ್ಲಿ ಉಣ್ಣೆ ಬಾಧೆಯೂ ಹೆಚ್ಚಾಗಿ ಕಂಡು ಬರುತ್ತಿದೆ. ಪಶು ಆಸ್ಪತ್ರೆಯಲ್ಲಿ ಉಣ್ಣೆ ನಿರ್ಮೂಲನೆ ಔಷಧಿ ಲಭ್ಯವಿದ್ದು ರೈತರು ಇದನ್ನು ಪಡೆದುಕೊಳ್ಳಬಹುದು. ಮಲೆನಾಡಿನ ಭಾಗದಲ್ಲಿ ಜಾನುವಾರುಗಳಿಗೆ ಲವಣ ಹಾಗೂ ವಿಟವಿನ್ ಕೊರತೆ ಇದೆ. ಆದ್ದರಿಂದ ಜಾನುವಾರುಗಳಿಗೆ ಲವಣ ಮಿಶ್ರಣವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಪಶುಆಸ್ಪತ್ರೆ ಜಾನುವಾರು ಅಧಿಕಾರಿ ಎನ್.ಟಿ.ಶೇಷಾಚಲ ಮಾತನಾಡಿ, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಈಗ ಗದ್ದೆ ಕೊಯ್ಲು ಆಗಿರುವುದರಿಂದ ಖಾಲಿ ಇರುವ ಗದ್ದೆಗಳಲ್ಲಿ ಸಿಒ3 ಮೇವಿನ ಬೀಜ ಹಾಕಿ ಮೇವಿನ ಬೆಳೆ ಬೆಳೆಯಬಹುದು. ಜಾನುವಾರು ಕಟ್ಟುವ ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸರಿಯಾದ ಸಮಯಕ್ಕೆ ಆಹಾರ, ಹುಲ್ಲು ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net