

ಶಿವಮೊಗ್ಗ: ಕಾವೇರಿ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಸುಪ್ರೀಂಕೊರ್ಟ್‌ನಲ್ಲಿ ನ್ಯಾಯ ಸಿಗದಂತಾಯಿತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯದಲ್ಲಿ ಕಾವೇರಿಯ ಹೋರಾಟ ದಿನೇದಿನೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯ ಇಲ್ಲಿ ಎದ್ದುಕಾಣುತ್ತಿದೆ ಎಂದು ಆರೋಪಿಸಿದರು.
ಎಲ್ಲಿಯವರೆಗೆ ಸರ್ಕಾರ ವಿಶ್ವಾಸ ಕಳೆದುಕೊಂಡಿತ್ತು ಅಂದರೆ ಕಾವೇರಿ ಕಣಿವೆ ರೈತರು ಕೂಡ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ನಡುವೆಯೂ ಸುಪ್ರೀಂಕೋರ್ಟ್‌ನಲ್ಲಿ ನಮಗೆ ಹಿನ್ನಡೆಯಾಯಿತು. ಆ ಭಾಗದ ರೈತರಿಗೆ ದೊಡ್ಡ ಆಘಾತವಾಗಿದೆ. ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕೈಗೊಂಡಿದೆ. ನ್ಯಾಯ ಸಿಗುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಒಂದು ಕಡೆ ಬೆಂಗಳೂರು ಬಂದ್ ಕರೆ ಕೊಡಲಾಗಿದೆ. ಮಂಡ್ಯದಲ್ಲಿ ಹೋರಾಟ ನಡೆಯುತ್ತಿದೆ. ರಾಜ್ಯದ ಬೇರೆ ಬೇರೆ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ರಾಜ್ಯ ಸರ್ಕಾರ, ಮಂತ್ರಿಗಳು ಹೋರಾಟದ ಬಗ್ಗೆ ತಲೆಕೆಡಿಸಿಕೊಳ್ಳದೆ ಐದು ಡಿಸಿಎಂ, ಆರು ಡಿಸಿಎಂ ಆಗಬೇಕು ಅಂತ ತಲೆಕೆಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಕನಸು ಹೊಂದಿದ್ದಾರೆ. ಈ ಕನಸು ನನಸು ಮಾಡಲು ರಾಜ್ಯ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಜೆಡಿಎಸ್ ಎನ್‌ಡಿಎ ತೆಕ್ಕೆಗೆ ಬಂದಿರೋದು ಸ್ವಾಗತಾರ್ಹ. ಬಿಜೆಪಿಯ ಎಲ್ಲ ನಾಯಕರು ಈ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ ಎಂದು ಹೇಳಿದರು.