

ಶ್ರವಣ್‌ಕುಮಾರ್ ನಾಳ, ಮಂಗಳೂರು
ಪೌರ ಕಾರ್ಮಿಕರಿಗೆ ವಸತಿ ಕಲ್ಪಿಸುವ ಮಹಾಕಾಳಿಪಡ್ಪುವಿನಲ್ಲಿ ಎರಡನೇ ಹಂತದ ಗೃಹಭಾಗ್ಯ ಯೋಜನೆ ಕಾಮಗಾರಿ ಆರಂಭಗೊಂಡಿದ್ದು, ನಿರ್ಮಾಣ ಕಾರ್ಯ ಸಮರ್ಪಕವಾಗಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಈ ಹಿಂದೆ 2019-20ರಲ್ಲಿ ಮಹಾಕಾಳಿಪಡ್ಪುವಿನಲ್ಲಿ ಮೊದಲ ಹಂತದ ಗೃಹಭಾಗ್ಯ ಯೋಜನೆಯಲ್ಲಿ ಹಸ್ತಾಂತರಗೊಂಡ ಮನೆಗಳು ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ನಿರ್ಮಾಣಗೊಂಡಿದ್ದರೂ ನಂತರ ಅನಿವಾರ್ಯವಾಗಿ ಪೌರ ಕಾರರ್ಮಿಕರು ಇಲ್ಲಿ ವಾಸಿಸುವಂತಾಗಿತ್ತು. ಎರಡನೇ ಹಂತದ ಇಲ್ಲಿ ಸುಮಾರು 505 ಚ.ಅಡಿ ವಿಸ್ತೀರ್ಣದಲ್ಲಿ ವಾಸಕ್ಕೆ ಯೋಗ್ಯವಾಗುವಂತೆ ನಿರ್ಮಿಸಬೇಕೆಂಬ ನಿಯಮವಿದ್ದರೂ, ಮನೆಗಳ ನಿರ್ಮಾಣದಲ್ಲಿ ಲೋಪವಾಗಿದೆ. ಮನೆಯ ಸಂಪೂರ್ಣ ವಿಸ್ತೀರ್ಣ ಸರಿಸುಮಾರು 375 ಚದರ ಅಡಿಯಷ್ಟು ಇದ್ದು, ಮನೆ ನಿರ್ಮಾಣದ ಬಳಿಕ ಈ ಹಿಂದಿನ ಮನೆಗಳಷ್ಟೇ ವಿಸ್ತೀರ್ಣ ವಾಸಕ್ಕೆ ಸಿಗಲಿದೆ. ಮತ್ತೆ ಹಿಂದಿನಂತೆ ವಾಸಕ್ಕೆ ಅಯೋಗ್ಯ ರೀತಿಯಲ್ಲಿ ಮನೆಗಳ ನಿರ್ಮಾಣವಾಗುತ್ತಿದೆ ಎನ್ನುವುದು ಪೌರ ಕಾರ್ಮಿಕರ ಆರೋಪ.
*ವಾಸಿಸಲು ಮನೆಯೊಳಗೆ ಜಾಗವಿಲ್ಲ
ಪೌರ ಕಾರರ್ಮಿಕರಿಗೆ ಮಹಾಕಾಳಿಪಡ್ಪುವಿನಲ್ಲಿ 2ನೇ ಹಂತದ ಗೃಹ ಭಾಗ್ಯ ಯೋಜನೆ ಕಾಮಗಾರಿಯಲ್ಲಿ ಸದ್ಯ ನಿರ್ಮಿಸುತ್ತಿರುವ ಮನೆಯಲ್ಲಿ ಅಡುಗೆ ಕೋಣೆ ಸೇರಿದಂತೆ ಎಲ್ಲಾ ಕೋಣೆಗಳು ಸಣ್ಣದಾಗಿದ್ದು, ಕುಂಟುಂಬವೊಂದು ವಾಸಿಸಲು ಮನೆಯೊಳಗೆ ಜಾಗವಿಲ್ಲ. ಕನಿಷ್ಠ 505 ಚ. ಅಡಿಯಾದರೂ ಬೇಕೆಂಬುವುದು ಪೌರ ಕಾರ್ಮಿಕರ ಬೇಡಿಕೆ. ಈ ಹಿಂದೆ ಹಸ್ತಾಂತರಗೊಂಡ ಮನೆಗಳೇ ವಾಸಕ್ಕೆ ಅಯೋಗ್ಯವೆಂದು ಗೊತ್ತಿದ್ದರೂ ಇದೀಗ ಮತ್ತದೇ ರೀತಿಯ ಮನೆಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದ್ದು ಪೌರ ಕಾರ್ಮಿಕರ ಅಸಮಾಧಾನಕ್ಕೆ ಕಾರಣ. ಒಂದು ಅಂತಸ್ಥಿನಲ್ಲಿ ಎಂಟು ಮನೆಗಳನ್ನು ರಚಿಸಲಾಗುತ್ತಿದೆ. ಒಂದು ಮನೆಯೊಳಗೆ 1 ಹಾಲ್, 1 ಕೋಣೆ, ಅಡುಗೆ ಕೋಣೆ, ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ನೆಲ ಮಹಡಿಯೊಂದಿಗೆ ಮೂರು ಅಂತಸ್ತು ನಿರ್ಮಿಸಲಾಗುತ್ತಿದ್ದು, ಒಟ್ಟು 32 ಮನೆಗಳು ಸಿದ್ಧಗೊಳ್ಳಲಿವೆ.
-----------------
ಜಿ ಪ್ಲಸ್ ಮಾದರಿಯಲ್ಲಿ ಅಸಮರ್ಪಕ ನಿರ್ಮಾಣ
ದಿನವಿಡೀ ಬಿಸಿಲು ಮಳೆ ಲೆಕ್ಕಿಸದೆ ಪಾಲಿಕೆ ವ್ಯಾಪ್ತಿಯಲ್ಲಿ ದುಡಿಯುವ ಪೌರ ಕಾರ್ಮಿಕರಿಗೆ ಮನೆ ನೀಡುವ ವೇಳೆ ಅನ್ಯಾಯ ಎಸಗಿರುವುದು ಎಷ್ಟು ಸರಿ ಎಂಬುವುದು ನಾಗರಿಕ ಸಮಾಜದ ಪ್ರಶ್ನೆ. ಮೊದಲ ಹಂತದಲ್ಲಿ ವಸತಿ ಯೋಜನೆ ಪೂರ್ಣಗೊಂಡ ಸಂದರ್ಭದಲ್ಲೇ ವಿರೋಧ ವ್ಯಕ್ತವಾಗಿತ್ತು. ಜಿ ಪ್ಲಸ್ ಮಾದರಿಯಲ್ಲಿ 32 ಮನೆಗಳನ್ನು ನಿರ್ಮಿಸಿದ್ದು ಪ್ರತೀ ಮನೆ ಕೇವಲ 270 ಚ. ಅಡಿ ನಿರ್ಮಿಸಿದ ಪರಿಣಾಮ ಜೀವನ ನಿರ್ವಹಣೆಗೆ ಅಯೋಗ್ಯವಾಗಿದ್ದವು. ಇವುಗಳಲ್ಲಿ ವಾಸಿಸಲು ಪೌರ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಸ್ಥಳ ಪರಿಶೀಲನೆ ನಡೆಸಿ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದರು. ವಾಸಕ್ಕೆ ಆಯೋಗ್ಯವಾದ ಮನೆಗಳ ಪೈಕಿ ಇಂದಿಗೂ ಅನೇಕ ಮನೆ ಖಾಲಿ ಇದೆ.
----------------
ಸರ್ಕಾರದ ವತಿಯಿಂದ ಸೇವಾ ಹಿರಿತನದ ಆಧಾರದಲ್ಲಿ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಲಾಗುತ್ತಿದೆ. ಎರಡನೇ ಹಂತದ ಕಾಮಗಾರಿ ಮಹಾಕಾಳಿಪಡ್ಪುವಿನಲ್ಲಿ ಪ್ರಗತಿಯಲ್ಲಿದೆ. ಕುಟುಂಬವೊಂದರ ನಿರ್ವಹಣೆಗೆ ಅಗತ್ಯವಿರುವಂತೆ ಮನೆ ನಿರ್ಮಿಸಲಾಗುತ್ತಿದೆ. ಲೋಪಗಳಾಗಿದ್ದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.
-ಆನಂದ್ ಸಿ.ಆರ್. ಪಾಲಿಕೆ ಆಯುಕ್ತರು
--------------
ಪೌರ ಕಾರ್ಮಿಕರಿಗೆ ನಿರ್ಮಿಸಲಾಗುತ್ತಿರುವ ಗೃಹಭಾಗ್ಯ ಯೋಜನೆ ಸಮರ್ಪಕವಾಗಿಲ್ಲ. ನಿರ್ಮಿಸುವ ಮನೆಗಳು ವಾಸಕ್ಕೆ ಅಯೋಗ್ಯವಾಗಿದೆ. 505 ಚ. ಅಡಿಗಳಿವೆ ಎಂದು ಹೇಳುತ್ತಿದ್ದಾರೆ. ಆದರೆ, ಮನೆಯ ವಿಸ್ತೀರ್ಣ ಸಣ್ಣದಾಗಿದೆ. ಮನೆಯೊಳಗೆ ಕನಿಷ್ಠ 505 ಚ. ಅಡಿ ಜಾಗ ಬೇಕು. ಆರಂಭದ ಹಂತದ ಕಾಮಗಾರಿಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮರ್ಪಕವಾಗಿ ನಿರ್ಮಿಸಬೇಕು.
-ಎಸ್. ಪಿ. ಆನಂದ್, ಪೌರ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ