

ನೀವು ಕೆಲವು ವರ್ಷಗಳ ಹಿಂದೆ ಪದವಿ ವ್ಯಾಸಂಗ ಮಾಡಿ ಒಂದೆರಡು ವಿಷಯಗಳಲ್ಲಿ ಉತ್ತೀರ್ಣರಾಗದೇ ಪದವಿ ಪೂರ್ಣಗೊಳಿಸಿಲ್ಲವೆಂದು ಪರಿತಪಿಸುತ್ತಿದ್ದೀರಾ? ನಿಮಗಾಗಿಯೇ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಮ್ಮೆ ಪರೀಕ್ಷೆ ಬರೆಯಲು ಒಂದು ಸುವರ್ಣ ಅವಕಾಶ ನೀಡಲು ನಿರ್ಧರಿಸಿದೆ.
ಉಳಿದುಕೊಂಡಿರುವ ವಿಷಯಗಳಲ್ಲಿ ತೇರ್ಗಡೆ ಹೊಂದಲು ಇದೊಂದೇ ಉತ್ತಮ ಅವಕಾಶ. ಶೀಘ್ರದಲ್ಲೇ ಬೆಂ.ವಿವಿ ಈ ಬಗ್ಗೆ ಪ್ರಕಟಣೆ ಹೊರಡಿಸಲಿದೆ. 2004ರಿಂದ 2019ರವರೆಗೆ ಇಂಜಿನಿಯರಿಂಗ್ ಒಳಗೊಂಡಂತೆ ಎಲ್ಲ ಪದವಿ ಕೋರ್ಸ್ಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಬಹುದು.
ಬೆಂ.ವಿವಿ ತ್ರಿಭಜನೆಗೂ ಮುನ್ನ ತನ್ನ ವ್ಯಾಪ್ತಿಯಲ್ಲಿದ್ದ 700ಕ್ಕೂ ಹೆಚ್ಚಿನ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ವಯಿಸಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೂಲಕ ಮಾನ್ಯತೆ ಪಡೆದಿರುವ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಅನ್ವಯಿಸುವುದಿಲ್ಲ. ಕೇವಲ ಯುವಿಸಿಇ ಸಿಟಿ ಮತ್ತು ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಕಳೆದ 15 ವರ್ಷಗಳಲ್ಲಿ ಬೆಂ.ವಿವಿ ಮೂಲಕ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಬಹುತೇಕರು ಉತ್ತೀರ್ಣರಾಗಿ ಪದವಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೆ ಮತ್ತೆ ಕೆಲವರು ಇರುವ ಐದು ಅವಕಾಶಗಳನ್ನು ಉಪಯೋಗಿಸಿ ಆನಂತರವೂ ಒಂದೆರಡು ವಿಷಯಗಳಲ್ಲಿ ಉತ್ತೀರ್ಣಗೊಳ್ಳದೇ ಜೀವನದಲ್ಲಿ ಜಿಗುಪ್ಸೆ ಬಂದು ಮುಂದಿನ ಉನ್ನತ ವ್ಯಾಸಂಗಕ್ಕೆ ಮತ್ತು ಉದ್ಯೋಗಕ್ಕೆ ಅರ್ಜಿ ಹಾಕಲು ಸಾಧ್ಯವಿಲ್ಲದೆಯೇ ಪರಿಶಪಿಸುತ್ತಿದ್ದಾರೆ. ಇಂತಹ ಸಾವಿರಾರು ವಿದ್ಯಾರ್ಥಿಗಳ ಪೈಕಿ ಕೆಲವರು ಮತ್ತೊಮ್ಮೆ ಅವಕಾಶ ನೀಡುವಂತೆ ಬೆಂ.ವಿವಿಗೆ ಪತ್ರ ಬರೆದು ಮನವಿ ಮಾಡಿದ್ದರು. ಒಂದಾದ ಮೇಲೆ ಒಂದರಂತೆ ಸಾಕಷ್ಟು ಮನವಿ ಪತ್ರಗಳು ಬರಲು ಆರಂಭಿಸಿದವು.
ಈ ಹಿನ್ನೆಲೆ ಬೆಂ.ವಿವಿ ಇತ್ತೀಚೆಗೆ ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದನ್ನು ರ್ಚಚಿಸಿತು. ಇದಕ್ಕೆ ಪರಿಷತ್ತಿನ ಸದಸ್ಯರು ಒಪ್ಪಿಗೆ ಸೂಚಿಸಿದ ಮೇಲೆ ಅನುತ್ತೀರ್ಣರಾದವರ ಬದುಕಿಗೆ ಆಶಾಕಿರಣವಾಗಿ ಅವಕಾಶ ನೀಡಲು ನಿರ್ಧರಿಸಿದೆ. ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ. ಆನಂತರ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಕಾಲೇಜುಗಳಿಗೆ ಭೇಟಿ ನೀಡಿ ನಿಗದಿತ ಪ್ರವೇಶ ಶುಲ್ಕ ಪಾವತಿಸಬೇಕು. ಮಾಡಿದ ಮೇಲೆ ಬೆಂ.ವಿವಿ ಪರೀಕ್ಷೆ ನಡೆಸಲಿದೆ.
ಪರೀಕ್ಷೆ ಬರೆಯಲು ಬೆಂ.ವಿವಿ ಅವಕಾಶ ನೀಡುತ್ತಿರುವುದು ಇದೇ ಮೊದಲಲ್ಲ. 2014ರಲ್ಲಿ ವಿವಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿವಿ ಆರಂಭವಾದ ವರ್ಷ 1964 ರಿಂದ 2014ರವರ ಅವಧಿಯಲ್ಲಿ ಅನುತ್ತೀರ್ಣರಾದವರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಅಲ್ಲದೆ, 2017ರಲ್ಲಿ ಕೇವಲ ಬಿ.ಇಡಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಿ ಫೇಲಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದು ತೇರ್ಗಡೆಯಾಗಲು ಅವಕಾಶ ನೀಡಿತ್ತು. ಈ ಸಮಯದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ ಕೆಲವರು ಸರ್ಕಾರಿ ಉದ್ಯೋಗ ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದೊಂದು ಉತ್ತಮ ಯೋಜನೆಯಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದನ್ನು ಮತ್ತೊಮ್ಮೆ ಅವಕಾಶ ನೀಡಲು ನಿರ್ಧರಿಸಿದೆ.
ಅನುತ್ತೀರ್ಣರಾದ ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ಮತ್ತೊಂದು ಅವಕಾಶ ಕಲ್ಪಿಸಲು ತೀರ್ವನಿಸಲಾಗಿದೆ. | ಡಾ.ಸಿ.ಶಿವರಾಜು ಮೌಲ್ಯಮಾಪನ ಕುಲಸಚಿವ
| ದೇವರಾಜ್ ಎಲ್. ಬೆಂಗಳೂರು