

ಹರಪನಹಳ್ಳಿ: ಅಂದಿನ ರಾಜಕಾರಣಿಗಳಲ್ಲಿ ಪರಸ್ಪರ ಸೌಹಾರ್ದತೆಯ ಭಾವನೆ ಇರುತ್ತಿತ್ತು, ಆದರೆ ಇಂದಿನ ರಾಜಕಾರಣಿಗಳಲ್ಲಿ ಒಬ್ಬರನ್ನೊಬ್ಬರು ಕಂಡರೆ ದ್ವೇಶದ ಭಾವನೆ ಎದ್ದು ಕಾಣುತ್ತಿದೆ ಈ ಬೆಳವಣಿಗೆ ನಿಜಕ್ಕೂ ಬೇಸರದ ಸಂಗತಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ನಗರದ ಟಿಎಂಎಇ ಸಂಸ್ಥೆಯ ಜ್ಞಾನ ಗಂಗೋತ್ರಿ ಆವರಣದಲ್ಲಿ ಭಾನುವಾರ ಕರ್ನಾಟಕ ರಾಜಕೀಯ ಅಕಾಡೆಮಿಯಿಂದ ಎಂಪಿ ಪ್ರಕಾಶ್ ಸಂಸದೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಹಿರಿಯ ರಾಜಕಾರಣಿಗಳ ನೈತಿಕ ರಾಜಕಾರಣದ ಪ್ರಜ್ಞೆಯನ್ನು ಇಂದಿನ ಯುವ ರಾಜಕಾರಣಿಗಳು ಬೆಳೆಸಿಕೊಳ್ಳಬೇಕು. ಯಾವುದೆ ಕೆಲಸ ಕಾರ್ಯಗಳು ಇರಲಿ ಅವುಗಳನ್ನು ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೇಷ್ಠ ರಾಜಕಾರಣಿ ಎಂಪಿ ಪ್ರಕಾಶ್ ಆಗಿದ್ದರು. ಸದನದಲ್ಲಿ ಪ್ರಬುದ್ಧ ಹಾಗೂ ಚಾಣಾಕ್ಷತೆಯ ಉತ್ತರ ನೀಡುವುದರ ಮೂಲಕ ಸೌಮ್ಯ ಸ್ವಭಾವದ ರಾಜಕಾರಣಿಗಳಾಗಿದ್ದರು.
ಅವರಂತೆಯೆ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಮಾಜಿ ಸಿಎಂ ಸದಾನಂದ ಗೌಡ ಮಾತನಾಡಿ, ರಾಜಕಾರಣದಲ್ಲಿ ರಾಜಕೀಯ ವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳು ಸ್ವಾಭಾವಿಕ ಆದರೆ ಒಬ್ಬ ರಾಜಕಾರಣಿಯಲ್ಲಿ ಉತ್ತಮ ಮನಸ್ಸುಳ್ಳ ಜನಪ್ರತಿನಿಧಿಯ ಗುಣಗಳು ಇರಬೇಕು ಹಾಗಾದರೆ ಮಾತ್ರ ಅವನು ನಿಜವಾದ ರಾಜಕಾರಣಿಯಾಗಲು ಸಾಧ್ಯ. ರಾಜಕಾರಣಿಗೆ ದೂರದೃಷ್ಟಿ ಕೋನದ ಚಿಂತನೆ ಇರಬೇಕು. ದಿನಕಳೆದಂತೆ ಸಾಮಾಜಿಕ ಮೌಲ್ಯಗಳು ಕುಸಿದು ಹೋಗುತ್ತಿರುವುದು ಬೇಸರದ ಸಂಗತಿ. ಸಮಾಜದಲ್ಲಿ ಸಾಮರಸ್ಯ, ಪ್ರೀತಿ, ವಿಶ್ವಾಸ ಹೊಂದಿರಬೇಕು ಅವುಗಳು ಎಂ ಪಿ ಪ್ರಕಾಶ್ ಅವರಲ್ಲಿ ಇದ್ದವು ಎಂದರು.
ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ವರಸಧ್ಯೊಜಾತ ಸ್ವಾಮೀಜಿ ಮಾತನಾಡಿ, ರಾಜಕೀಯ ಹಾಗೂ ಸಾಹಿತ್ಯ ಸಾಮಾನ್ಯವಾಗಿ ವಿರುದ್ಧ ದಿಕ್ಕುಗಳಲ್ಲಿ ಸಾಗುವ ನದಿಗಳಿದ್ದಂತೆ ಆದರೆ ಇವೆರಡೂ ಗುಣಗಳನ್ನು ಎಂ ಪಿ ಪ್ರಕಾಶ್ ಅವರು ಮೈಗೂಡಿಸಿಕೊಂಡಿದ್ದರು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ , ವೆಂಕಟೇಶ್ ವಕೀಲ, ಹುಲಿಕಟ್ಟಿ ಚಂದ್ರಪ್ಪ, ರೆಹಮಾನ್ ವಕೀಲ, ನಂಜನಗೌಡ, ಆರುಂಡಿ ನಾಗರಾಜ, ಇಜಂತ್ಕರ್ ಮಂಜುನಾಥ, ಟಿಎಂಎಇ ಸಂಸ್ಥೆಯ ಡೀನ್ ಟಿ ಎಂ ರಾಜಶೇಖರ್, ಪ್ರಾಚಾರ್ಯ ಸಿಎಂ ವೀರೇಶ ಇತರರಿದ್ದರು.