

ಯಲಬುರ್ಗಾ: ಗುಣಾತ್ಮಕ ಶಿಕ್ಷಣ, ಹಸಿರೀಕರಣಕ್ಕೆ ಆದ್ಯತೆ ನೀಡಿರುವ ತಾಲೂಕಿನ ಬೇವೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದ ರಸ್ತೆಗೆ ಸಿಸಿ, ಸುತ್ತಲೂ ಕಾಂಪೌಂಡ್ ವ್ಯವಸ್ಥೆ , ಸುಣ್ಣಬಣ್ಣವಿಲ್ಲದೆ ಕಟ್ಟಡ ಮಾಸಿ ಹೋಗಿದೆ.
ಇದನ್ನೂ ಓದಿ:http://ಮೂಲ ಸೌಲಭ್ಯ ಕಾಣದ ಬೇವೂರು ಮುರಾರ್ಜಿ
ತಾಲೂಕು ಕೇಂದ್ರದಿಂದ 17 ಕಿ.ಮೀ. ದೂರದಲ್ಲಿದೆ. ಗ್ರಾಮ ಹೊರ ವಲಯದ 10.26 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, 2011ರಲ್ಲಿ ಉದ್ಘಾಟನೆಗೊಂಡಿದೆ.
6 ರಿಂದ 10ನೇ ತರಗತಿವರೆಗೆ ಇರುವ ವಸತಿ ಶಾಲೆಯಲ್ಲಿ ಒಟ್ಟು 250 ವಿದ್ಯಾರ್ಥಿಗಳಿದ್ದು, 13 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಾರೆ. ಶಾಲಾ ಆವರಣದಲ್ಲಿ ಅಲಂಕಾರಿಕ ಸಸಿಗಳು, ಹೂವು, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ವಸತಿ ಶಾಲೆಯಲ್ಲಿ ಶಿಕ್ಷಣ, ಸುಂದರ ಪರಿಸರಕ್ಕೆ ಕೊರತೆ ಇಲ್ಲ. ಮುರಾರ್ಜಿ ವಸತಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿ ಜಿಲ್ಲೆಗೆ ಪ್ರಥಮ, ಈ ಸಲ ಎರಡನೇ ಸ್ಥಾನ ಪಡೆದಿದೆ.
ಆದರೆ ಮೂಲ ಸೌಕರ್ಯಗಳಿಂದ ಬಳಲುತ್ತಿದೆ. ಹಲವಾರು ವರ್ಷಗಳಿಂದ ಸುಣ್ಣ ಬಣ್ಣ ಕಾಣದೇ, ನವೀಕರಣಗೊಳ್ಳದೇ ಹಳೆಯ ಕಟ್ಟಡದಂತೆ ಕಾಣುತ್ತಿದೆ. ಸದ್ಯಕ್ಕೆ ಶಿಕ್ಷಕರ 4 ವಸತಿ ಗೃಹಗಳಿದ್ದು, ಇನ್ನೂ 8 ವಸತಿ ಗೃಹಗಳ ಅವಶ್ಯಕತೆ ಇದೆ.
ಬಾಲಕ, ಬಾಲಕಿಯರ ವಸತಿ ನಿಲಯಗಳಲ್ಲಿ ಬೆಡ್ ಹರಿದು ಹೋಗಿವೆ. ಕೆಲ ರೂಮ್‌ಗಳಲ್ಲಿ ಫ್ಯಾನ್ ಅಳವಡಿಕೆ ಮಾಡಿಲ್ಲ. ಒಡೆದು ಹೋದ ಕಿಟಕಿಗಳ ಗ್ಲಾಸ್ ಹಾಕಲು ಟೆಂಡರ್ ಪಡೆದವರು ಅರೆಬರೆ ಕೆಲಸ ಮಾಡಿದ್ದಾರೆ.
ಈ ಕುರಿತು ವಸತಿ ಶಾಲೆ ಆಡಳಿತ ಮಂಡಳಿ, ಮಕ್ಕಳ ಪಾಲಕರು ಸಂಬಂಧಿಸಿದ ಜನಪ್ರತಿನಿಧಿಗಳು, ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಾಮೀಣ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮತ್ತು ಮಕ್ಕಳಿಗೆ ವಸತಿ ವ್ಯವಸ್ಥೆ, ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಶ್ರಮಿಸುತ್ತಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.