ಗ್ರಾಮೀಣ ಭಾಗಗಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಲಿ

Doddangouda
ಹನುಮಸಾಗರ ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿ ನರೇಗಾದಡಿ ನಿರ್ಮಿಸಿದ ಭಾರತ್ ನಿರ್ಮಾಣ ಸೇವಾ ಕೇಂದ್ರದ ಕಟ್ಟಡವನ್ನು ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಉದ್ಘಾಟಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ತಾಪಂ ಇಒ ಶಿವಪ್ಪ ಸುಬೇದಾರ, ಗ್ರಾಪಂ ಅಧ್ಯಕ್ಷೆ ಕಲ್ಲವ್ವ ವಾರಿಕಲ್, ಉಪಾಧ್ಯಕ್ಷೆ ಹನಮವ್ವ ರಾಜೂರು ಇತರರಿದ್ದರು.
Published on

ಹನುಮಸಾಗರ: ಸರ್ಕಾರ ನೀಡುವ ಎಲ್ಲ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಜನರಿಗೆ ಸರಿಯಾಗಿ ತಲುಪಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಶಾಸಕ ದೊಡ್ಡನಗೌಡ ಎಚ್ ಪಾಟೀಲ್ ಹೇಳಿದರು.

ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ಭಾರತ್ ನಿರ್ಮಾಣ ಸೇವಾ ಕೇಂದ್ರದ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳಿಗೆ ಅರ್ಥ ಬರುತ್ತದೆ ಎಂದರು.

ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಸೇರಿ ವಿವಿಧ ಮೂಲಸೌಲಭ್ಯಗಳನ್ನು ಗ್ರಾಪಂ ಒದಗಿಸಬೇಕು. ಸೌಲಭ್ಯಗಳ ನೆಪದಲ್ಲಿ ಜನರನ್ನು ಸತಾಯಿಸದೆ, ಅಗತ್ಯ ದಾಖಲೆಗಳನ್ನು ಪಡೆದುಕೊಂಡು ನೀಡಬೇಕು. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮೀಣಾಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ತಾಪಂ ಇಒ ಶಿವಪ್ಪ ಸುಬೇದಾರ, ಗ್ರಾಪಂ ಅಧ್ಯಕ್ಷೆ ಕಲ್ಲವ್ವ ವಾರಿಕಲ್, ಉಪಾಧ್ಯಕ್ಷೆ ಹನಮವ್ವ ರಾಜೂರು, ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ತಾಂತ್ರಿಕ ಸಂಯೋಜಕ ಬಸವರಾಜ ಯಲಬುರ್ತಿ, ಪಿಡಿಒ ಹನುಮಂತರಾಯ ಯಂಕಂಚಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net