ಸೌಲಭ್ಯಗಳು ಅಂಗವಿಕಲರಿಗೆ ದೊರಕಲಿ

18 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಇಲಾಖೆಯಲ್ಲಿ ಅನುಷ್ಠಾನಗೊಳಿಸುವ ಬಡತನ ನಿರ್ಮೂಲನಾ ಕಾರ್ಯಕ್ರಮಗಳಲ್ಲಿ ಶೇ. 5ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿಟ್ಟಿವೆ. ಇದರ ಸದ್ಬಳಕೆಯಾಗಲಿ ಮತ್ತು ಸರ್ಕಾರದ ಸೌಲಭ್ಯಗಳು ಅರ್ಹತೆಗೆ ಅನುಗುಣವಾಗಿ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮಗಳ ರಾಜ್ಯ ಆಯುಕ್ತ ದಾಸ್​ ಸೂರ್ಯವಂಶಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮಗಳ ಕುರಿತು ವಿವಿಧ ಇಲಾಖೆಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕೇಂದ್ರ ಮತ್ತು ರಾಜ್ಯದಲ್ಲಿ ಜಾರಿಗೆ ಬಂದಾಗಿನಿಂದ ಅಂಗವಿಕಲರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರುಪ್​ ಎ ಮತ್ತು ಬಿ ಹುದ್ದೆಗಳಲ್ಲಿ ಶೇ. 4ರಷ್ಟು, ಸಿ ಮತ್ತು ಗ್ರುಪ್​ ಡಿ ಹುದ್ದೆಗಳಲ್ಲಿ ಶೇ. 5ರಷ್ಟು ಅಂಗವಿಕಲರಿಗೆ ಮೀಸಲಿರಿಸಲು ಅಧಿನಿಯಮದಲ್ಲಿ ಆದೇಶಿಸಲಾಗಿದೆ. ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಸರ್ಕಾರದ ಎಲ್ಲ ಇಲಾಖೆ ಹಾಗೂ ಗ್ರಾಪಂ., ನಗರ ಸ್ಥಳಿಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಶೇ.5 ರಷ್ಟು ಅನುದಾನ ಮೀಸಲು ಇಡಲಾಗುತ್ತದೆ. ಆದರೆ ಅರ್ಹ ಅಂಗವಿಕಲರಿಗೆ ಮತ್ತು ಮೀಸಲು ಪ್ರಮಾಣಕ್ಕೆ ಅನುಗುಣವಾಗಿ ಅನುದಾನ ವೆಚ್ಚವಾಗುತ್ತಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳ ಮತ್ತು ಅಂಗವಿಕಲರ ಮೀಸಲಾತಿ ಕುರಿತು ಜನರಲ್ಲಿ ವ್ಯಾಪಕ ಪ್ರಚಾರ ಮಾಡಿ ಜಾಗೃತಿ ಮೂಡಿಸಬೇಕು ಎಂದರು.

ರಾಜ್ಯ ಸರ್ಕಾರ ರಾಷ್ಟ್ರದಲ್ಲೇ ಮೊದಲ ಬಾರಿಗೆ, ಮೊದಲ ರಾಜ್ಯವಾಗಿ ಹೊಸ ಯೊಜನೆಯೊಂದನ್ನು ಅಂಗವಿಕಲರ ಪಾಲಕರಿಗೆ ಜಾರಿಗೊಳಿಸುತ್ತಿದೆ. ಅಂಗವಿಕಲರನ್ನು ಪಾಲನೆ, ಪೋಷಣೆ ಮಾಡುವವರಿಗೆ ಮಾಸಿಕ ಪಿಂಚಣಿ ನೀಡುವ ಯೋಜನೆಯನ್ನು ಸದ್ಯದಲ್ಲೇ ಅನುಷ್ಠಾನಗೊಳಿಸಲಿದೆ. ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 3 ಸಾವಿರ ಅಂಗವಿಕಲ ಮಕ್ಕಳು ಶಾಲೆಗೆ ದಾಖಲಾಗಿದ್ದು, ಪ್ರತಿ ತಾಲೂಕಿಗೆ 3 ಜನ ಶಿಕ್ಷಕರು ಮಾತ್ರ ಇದ್ದು, ಸರಿಯಾದ ನಿರ್ವಹಣೆ ಆಗುತ್ತಿಲ್ಲ. ಈ ಕುರಿತು ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಂಗವಿಕಲರು, ಇದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net