

ಚಿತ್ರದುರ್ಗ: ಐತಿಹಾಸಿಕ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಬುಧವಾರ ಚಾಲನೆ ನೀಡಿದರು.
ಕೋಟೆ ಮುಂಭಾಗದ ಖಾಸಗಿ ಹೋಟೆಲ್ ಪಕ್ಕದಲ್ಲಿ 2018-19ನೇ ಸಾಲಿನ ಬಂಡವಾಳ ವೆಚ್ಚ ಯೋಜನೆಯಡಿ ಪ್ರವಾಸಿ ಮಾಹಿತಿ ಕೇಂದ್ರ, ಪಾರ್ಕಿಂಗ್ ಸೌಲಭ್ಯ, ಲಗೇಜ್ ಕೊಠಡಿ, ಕುಡಿಯುವ ನೀರಿನ ಸೌಲಭ್ಯ, ಪ್ರವಾಸಿಗರಿಗೆ ವಿಶ್ರಾಂತಿ ಕೊಠಡಿ, ಮಹಿಳಾ ಮತ್ತು ಪುರುಷ ಸ್ನಾನ ಗೃಹ ಹಾಗೂ ಶೌಚಗೃಹಗಳನ್ನು ನಿರ್ಮಿಸಲಾಗಿದೆ.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಿಂದ ಈ ಕಾಮಗಾರಿಗಳು ಪೂರ್ಣಗೊಂಡು ಬಹಳ ದಿನಗಳು ಆಗಿದ್ದವು. ಕೆಲ ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ವೇಳೆ ಶೀಘ್ರ ಉದ್ಘಾಟಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸೌಲಭ್ಯಗಳೆಲ್ಲವೂ ಒಂದೇ ಆವರಣದೊಳಗೆ ಇದ್ದು, ರಕ್ಷಣೆಗೆ ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ಪ್ರವಾಸಿಗರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಪೌರಾಯುಕ್ತೆ ಎಂ.ರೇಣುಕಾ, ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಡಾ.ನಾಗವೇಣಿ, ಕೆಆರ್‌ಐಡಿಎಲ್ ಇಇ ಟಿ.ಎನ್.ವಿನಾಯಕ, ಸಾಹಸಿ ಜ್ಯೋತಿರಾಜ್ ಇದ್ದರು.