

ಮೈಸೂರು: ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಶ್ರವಣ ಸಾಧನ ಬಳಕೆಯಿಂದ ಮೂರು ವರ್ಷದಲ್ಲಿ ಸಾಮಾನ್ಯರಂತೆಯೇ ಕಲಿಯಲು ಸಾಧ್ಯವಾಗಲಿದೆ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ತಿಳಿಸಿದರು.
ಬ್ಯಾಂಕ್ ಆಫ್ ಬರೋಡ ವತಿಯಿಂದ ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳಿಗೆ ಸಾಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರವಣ ಸಾಧನದ ಬಳಕೆಯಿಂದ ದೋಷವುಳ್ಳ ಮಗುವಿಗೆ ಮಾತು ಹಾಗೂ ಶಬ್ದ ಆಲಿಸಲು ಅನುಕೂಲವಾಗಲಿದೆ. ಜತೆಗೆ ಮಾತು ಸಹ ಬರಲಿದೆ. ವಿಶೇಷ ಅಗತ್ಯವುಳ್ಳ ಮಕ್ಕಳು ಎಲ್ಲ ಮಕ್ಕಳಂತೆ ಕಲಿಕೆಯಲ್ಲಿ ಮುಂದುವರಿಯಲು ಸಾಧನಗಳು ನೆರವಾಗಲಿವೆ ಎಂದು ತಿಳಿಸಿದರು.
ಬದುಕಿನಲ್ಲಿ ಅನೇಕ ಕಷ್ಟಗಳು, ಸವಾಲುಗಳು ಎದುರಾಗಲಿವೆ. ವಿಶೇಷ ಮಕ್ಕಳೂ ಇಂತಹ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ನೆರವು ನೀಡಿದೆ. ನಮ್ಮ ಸಂಸ್ಥೆಯಲ್ಲೇ ಉಳಿದುಕೊಂಡು ತರಬೇತಿ ಪಡೆದುಕೊಳ್ಳಬಹುದು ಎಂದರು.
ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ವ್ಯವಸ್ಥಾಪಕ ಅನೂಜ್ ಅವಸ್ಥಿ ಮಾತನಾಡಿ, ಸಮಾಜದ ಎಲ್ಲ ಮಕ್ಕಳಿಗೂ ಸರಿಸಮಾನವಾಗಿ ಅವಕಾಶ ಕಲ್ಪಿಸಿಕೊಡಬೇಕಿದೆ. ದೈಹಿಕ, ಮಾನಸಿಕವಾಗಿ ನ್ಯೂನತೆಯುಳ್ಳ ಮಕ್ಕಳು ಸಹ ಎಲ್ಲರೊಂದಿಗೆ ಸಹಬಾಳ್ವೆ ನಡೆಸಬೇಕು. ಈ ನಿಟ್ಟಿನಲ್ಲಿ ಎಲ್ಲ ಸಂಘ-ಸಂಸ್ಥೆಗಳು ನೆರವಾಗಬೇಕು. ಇದಕ್ಕೆ ಪೂರಕವಾಗಿ ಬ್ಯಾಂಕ್ ಸಹ ಸಮುದಾಯ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿದೆ ಎಂದರು.
ಮೇಯರ್ ಶಿವಕುಮಾರ್, ಆಯಿಷ್ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೇವಾ ಕಾರ್ಯಕ್ರಮಗಳಿಗೆ ಪಾಲಿಕೆಯಿಂದ 1 ಕೋಟಿ ರೂ. ಆರ್ಥಿಕ ಸಹಾಯ ನೀಡಲಾಗಿದೆ ಎಂದರು.
ಇದೇ ವೇಳೆ ವಾಕ್ ಮತ್ತು ಶ್ರವಣ ದೋಷವುಳ್ಳ 37 ಮಕ್ಕಳಿಗೆ 55,500 ರೂ. ವೆಚ್ಚ ಶ್ರವಣ ಸಾಧನ ನೀಡಲಾಯಿತು.