

ವಿಜಯಪುರ: ನಗರದ ಬಬಲೇಶ್ವರ ವೃತ್ತದ ಬಳಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ವಾಣಿಜ್ಯ ಸಂಕೀರ್ಣದ ಮಳಿಗೆಗಳು ಹಂಚಿಕೆಯಾಗದೇ ಇರುವ ಬಗ್ಗೆ ಬಿಜೆಪಿ ಮುಖಂಡ ಉಮೇಶ ಕಾರಜೋಳ ಖಂಡನೆ ವ್ಯಕ್ತಪಡಿಸಿದ್ದಾರೆ.
ಎಸ್‌ಸಿಪಿ - ಟಿಎಸ್‌ಪಿ ಅನುದಾನದಡಿ ನಿರ್ಮಿಸಿದ ಈ ಮಳಿಗೆಗಳನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಹಂಚಬೇಕು. ಆದರೆ ಮಹಾನಗರ ಪಾಲಿಕೆಯ ಸಭೆಯಲ್ಲಿ ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಷಯವಾಗಿ ಮಹಾನಗರ ಪಾಲಿಕೆ ನಿಯಮಾವಳಿ ಗಾಳಿಗೆ ತೂರಿದೆಯೇ ಎಂದು ಬಿಜೆಪಿ ಮುಖಂಡ ಉಮೇಶ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಅತಿಕ್ರಮಣದಲ್ಲಿ ಅಂಗಡಿ ಕಳೆದುಕೊಂಡಿರುವವರಿಗೆ ಹಾಗೂ ಉಳಿದವರಿಗೆ ಹಂಚಿಕೆ ಮಾಡುವ ವಿಷಯ ಬರೆಯಲಾಗಿದೆ, ಈ ಮಳಿಗೆಗಳನ್ನು ಉಳಿದ ಸಮುದಾಯಗಳಿಗೆ ಹಂಚಿಕೆ ಮಾಡಲು ಬರುವುದೇ ಇಲ್ಲ.
2020-21 ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ-ಟಿಎಸ್‌ಪಿ ಅಡಿಯಲ್ಲಿ 3.56 ಕೋಟಿ ರೂ. ವೆಚ್ಚದಲ್ಲಿ ಈ ಮಳಿಗೆ ನಿರ್ಮಿಸಿ 2022 ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ.
ಹೀಗಿರುವಾಗ ಎಸ್ಸಿ ಮುದಾಯಕ್ಕೆ ಉಪ ಜೀವನ ಹಾಗೂ ಸ್ವ ಉದ್ಯೋಗಕ್ಕೆ ಅನುಕೂಲವಾಗಲು ಈ ಮಳಿಗೆ ಹಂಚಿಕೆಯಾಗಬೇಕು, ಆದರೆ ಈ ವಿಷಯವಾಗಿ ಮಹಾ ನಗರ ಪಾಲಿಕೆ ಬೇರೆ ನಿಲುವು ತಾಳಿ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಈ ವಿಷಯವನ್ನೇ ಉಲ್ಲೇಖಿಸಿಲ್ಲ, ಹೀಗಾಗಿ ಪರಿಶಿಷ್ಟ ವರ್ಗಕ್ಕೆ ತುಂಬ ಅನ್ಯಾಯವಾಗಿದೆ. ಹೀಗಾಗಿ ಕೂಡಲೇ ಕ್ರಮ ವಹಿಸಬೇಕೆಂದು ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.