ಮಧ್ಯವರ್ತಿಗಳ ಹಾವಳಿ ತಡೆಗೆ ಅನುಕೂಲ

Facilitate prevention of middlemen
ಜಮಖಂಡಿ ನಗರದ ತಾಲೂಕು ಆಡಳಿತ ಸೌಧದ ತಾಲೂಕು ಉಪ ನೋದಣಿ ಕಾರ್ಯಾಲಯದಲ್ಲಿ ಕಾವೇರಿ 2.0 ನೂತನ ತಂತ್ರಾಂಶಕ್ಕೆ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಚಾಲನೆ ನೀಡಿದರು. ಎಸ್.ಜಿ. ನ್ಯಾಮಗೌಡ, ಮಾರುತಿ ಗದಾಡೆ, ಎಸ್.ಆರ್. ಸಿದ್ದಾರ ಇತರರಿದ್ದರು.
Published on

ಜಮಖಂಡಿ: ಸಾರ್ವಜನಿಕರು ಕಾವೇರಿ 2.0 ಹೊಸ ತಂತ್ರಾಂಶದ ಮೂಲಕ ತಮ್ಮ ಆಸ್ತಿ-ಪಾಸ್ತಿ, ನಿವೇಶನ ಖರೀದಿ, ಮಾರಾಟ ನೋಂದಣಿ ದಾಖಲೆಗಳನ್ನು ಅಪ್ಲೋಡ್ ಮಾಡಿ ನಿಗದಿತ ಸಮಯದಲ್ಲಿ ನೋಂದಣಿ ಮಾಡಿಸಬಹುದು. ಈ ನೂತನ ತಂತ್ರಾಂಶದಿಂದ ದಿನಗಟ್ಟಲೇ ಕಾಯುವುದು, ಮಧ್ಯವರ್ತಿಗಳ ಹಾವಳಿ ತಡೆಯಬಹುದಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

ನಗರದ ತಾಲೂಕು ಆಡಳಿತ ಸೌಧದಲ್ಲಿನ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಶ್ರಯದಲ್ಲಿ ತಾಲೂಕು ಉಪನೋಂದಣಿ ಕಾರ್ಯಾಲಯದಲ್ಲಿ ಕಾವೇರಿ 2.0 ನೂತನ ತಂತ್ರಾಂಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರು ಈ ಹಿಂದೆ ಜಮೀನು ಖರೀದಿ ಹಾಗೂ ಮಾರಾಟದ ನೋಂದಣಿಗಾಗಿ ದಿನಗಟ್ಟಲೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಾಯಬೇಕಾಗಿತ್ತು. ಆದರೆ ಸರ್ಕಾರ ಹೊಸ ತಂತ್ರಾಂಶ ಅನುಷ್ಠಾನಗೊಳಿಸಿದ್ದು ಆನ್‌ಲೈನ್ ಮೂಲಕ ಸಾರ್ವಜನಿಕರು ತಮ್ಮ ಆಸ್ತಿ, ನಿವೇಶನ ಖರೀದಿ, ಮಾರಾಟ ನೋಂದಣಿಯನ್ನು ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲೆಗಳನ್ನು ಅಪ್ಲೋಡ್ ಮಾಡಿ ನಿಗದಿತ ಸರ್ಕಾರಿ ಶುಲ್ಕವನ್ನು ಸಹ ಆನ್‌ಲೈನ್‌ನಲ್ಲೇ ಪಾವತಿಸಬೇಕು. ದಿನಾಂಕ, ಸಮಯ ನಿಗದಿಪಡಿಸಿಕೊಂಡು ಆ ದಿನಾಂಕ ಹಾಗೂ ಸಮಯಕ್ಕೆ ಅಧಿಕಾರಿಗಳ ಕಚೇರಿಗೆ ಆಗಮಿಸಿ ಅವರ ಭಾವಚಿತ್ರ ಹೆಬ್ಬೆಟ್ಟಿನ ಗುರುತು ನೀಡಿ ನೋಂದಣಿ ಮಾಡಿ ಕೆಲವೇ ನಿಮಿಷಗಳಲ್ಲಿ ದಾಖಲೆ ಪಡೆಯಬಹುದಾಗಿದೆ ಎಂದರು.

ಉಪನೋಂದಣಾಧಿಕಾರಿ ಕಚೇರಿ ಅಧಿಕಾರಿಗಳು ಹಾಗೂ ಗಣಕ ಯಂತ್ರ ನಿರ್ವಾಹಕರು, ಸಾರ್ವಜನಿಕರು ಆನ್‌ಲೈನ್ ಮೂಲಕ ದಿನಾಂಕ ನಿಗದಿಪಡಿಸಿ ನೋಂದಣಿ ಪರಿಶೀಲಿಸಿ ಲೋಪದೋಷಗಳು ಇದ್ದಲ್ಲಿ ಸಾರ್ವಜನಿಕರ ಗಮನಕ್ಕೆ ತಂದು ಸರಿಪಡಿಸುವುದು, ನೋಂದಣಿ ಮಾಡಿಸುವುದು ಕಾವೇರಿ 2.0 ತಂತ್ರಾಂಶ ಅನುಷ್ಠಾನದಿಂದ ಸಾಧ್ಯವಾಗಲಿದೆ ಎಂದರು.

ಜಿಲ್ಲಾ ನೋಂದಣಾಧಿಕಾರಿ ಎಸ್.ಜಿ. ನ್ಯಾಮಗೌಡ ಮಾತನಾಡಿ, ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಸರ್ಕಾರ ನೂತನ ಕಾವೇರಿ 2.0 ತಂತ್ರಾಂಶ ಜಾರಿಗೆ ತಂದಿದೆ. ಸಾರ್ವಜನಿಕರು ತಮ್ಮ ಆಸ್ತಿಯ ನೋಂದಣಿಗಾಗಿ ಕಚೇರಿಗೆ ಅಲಿದಾಡದೆ ತಮ್ಮ ಮನೆಯಲ್ಲೇ ಕುಳಿತು ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.

ತಾಲೂಕು ಉಪನೋಂದಣಾಧಿಕಾರಿ ಮಾರುತಿ ಗದಾಡೆ ಮಾತನಾಡಿದರು. ತಾಲೂಕು ಖಜಾನಾಧಿಕಾರಿ ಬಿರಾದಾರ, ಎಸ್.ಆರ್. ಸಿದ್ದಾರ, ಬಸಪ್ಪ ಗದಾಡೆ, ದಾಸ್ತಾವೇಜುದಾರರ ಸಂಘದ ಅಧ್ಯಕ್ಷ ಬಸವರಾಜ ತೆಲಸಂಗ ಇತರರಿದ್ದರು. ಮೋಹನ ಸಬರದ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net