

ಸಾಲಿಗ್ರಾಮ: ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಜನವರಿ 5ರಿಂದ ಆರಂಭವಾಗುವ ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ದನಗಳ ಜಾತ್ರೆ ಮತ್ತು ಜ.15ರಂದು ಜರುಗುವ ಶ್ರೀರಾಮ ರಥೋತ್ಸವದಲ್ಲಿ ಯಾವುದಕ್ಕೂ ಕೊರತೆಯಾಗದಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಶಾಸಕ ಡಿ.ರವಿಶಂಕರ್ ಸೂಚನೆ ನೀಡಿದರು.
ಚುಂಚನಕಟ್ಟೆ ಶ್ರೀರಾಮ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀರಾಮ ದೇವರ ರಥೋತ್ಸವ ಮತ್ತು ದನಗಳ ಜಾತ್ರೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತ್ರೆಗೆ ಬರುವ ರಾಸುಗಳಿಗೆ ಮತ್ತು ಜನರಿಗೆ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ರಸ್ತೆಯಲ್ಲಿ ಧೂಳು ಏಳದಂತೆ ನೀರು ಹಾಕಲು ಆದ್ಯತೆ ನೀಡುವಂತೆ ಕುಪ್ಪೆ-ಹಳಿಯೂರು ಪಿಡಿಒಗಳಾದ ರಾಜೇಶ್ ಮತ್ತು ಚಿದಾನಂದ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಾತ್ರಾ ಆವರಣದಲ್ಲಿ ರಾಸುಗಳಿಗೆ ಚಿಕಿತ್ಸೆ ನೀಡಲು ಮೂರು ಕಡೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ಜಾತ್ರಾ ಮಾಳದಲ್ಲಿ ಮತ್ತು ಶ್ರೀರಾಮ ದೇವಾಲಯಕ್ಕೆ ಝಗಮಗಿಸುವ ವಿದ್ಯುತ್ ಅಲಂಕಾರವನ್ನು ಡಿ.31ರ ಒಳಗೆ ಮಾಡುವಂತೆ ಸೆಸ್ಕ್ ಎಇಇ ಅರ್ಕೇಶ್ ಮೂರ್ತಿಗೆ ಹಾಗೂ ಜಾತ್ರೆ ಮತ್ತು ರಥೋತ್ಸವಕ್ಕೆ ಆಗಮಿಸುವ ಜನರ ಅನುಕೂಲಕ್ಕಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಲಕ್ಷಾಂತರ ಜನರು ಭಾಗವಹಿಸುವುದರಿಂದ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆ ಒದಗಿಸಿ ಜನರಿಗೆ ಸೂಕ್ತ ರಕ್ಷಣೆ ಕೊಡಿ ಎಂದು ಸೂಚಿಸಿದ ಅವರು ಜಾತ್ರೆ ಕುರಿತು ರಾಜ್ಯ ಮಟ್ಟದಲ್ಲಿ ಪ್ರಚಾರ ನೀಡುವಂತೆ ತಾಲೂಕು ಅಡಳಿತಕ್ಕೆ ನಿರ್ದೇಶನ ನೀಡಿದರು.
ಸರ್ಕಾರದ ಯೋಜನೆಗಳನ್ನು ಹೆಚ್ಚಿನ ಪ್ರಚಾರ ಪಡಿಸಲು ಆಯಾ ಇಲಾಖೆಯಿಂದ ಸಿಗುವ ಸೌಲಭ್ಯದ ಕುರಿತು ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಮತ್ತು ಮಹಿಳಾ ಕಲ್ಯಾಣ ಇಲಾಖೆ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಆರಂಭಿಸುವಂತೆ ಸೂಚಿಸಿದರು.
ಶ್ರೀರಾಮ ರಥೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಯರಾಮೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀರಾಮಪುರ ಆನಂದ್, ವಕೀಲ ಪಣೀತ್, ಕಾಂಗ್ರೆಸ್ ಮುಖಂಡ ಮಾದು ಇತರರು ಮಾತಾಡಿದರು.
ತಹಸೀಲ್ದಾರ್ ಸುರೇಂದ್ರ ಮೂರ್ತಿ, ನರಗುಂದ, ತಾ.ಪಂ.ಇಒ ಕುಲದೀಪ್, ಬಿಇಒ ಅಗ್ನಿಶಾಮಕ ಠಾಣೆಯ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆಯ ಮಲ್ಲಿಕಾರ್ಜುನ್, ಉಪತಹಸೀಲ್ದಾರ್ ಶರತ್, ಆರ್.ಐ, ಚಿದಾನಂದಬಾಬು, ಪಿಡಿಒ ರಾಜೇಶ್, ಇಂಜಿನಿಯರ್ ಸಿದ್ದೇಶ್ವರ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್ ಎಂ.ಎಸ್.ಮಹದೇವ್, ವಕ್ತಾರ ಸಯದ್ ಜಾಬೀರ್, ನಗರಾಧ್ಯಕ್ಷ ಪ್ರಭಾಕರ್, ಜಿಪಂ.ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಕುಪ್ಪೆ ಸಹಕಾರ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್, ಹಳಿಯೂರು ಗ್ರಾ.ಪಂ. ಉಪಾಧ್ಯಕ್ಷ ನೂತನ್, ಕುಪ್ಪೆ ಗ್ರಾ.ಪಂ. ಸದಸ್ಯರಾದ ಗೋವಿಂದೇಗೌಡ, ಗೌರಮ್ಮ, ಚೆಲುವರಾಜು, ಸಾಲಿಗ್ರಾಮ ಸಂತೋಷ್, ಶಾಸಕರ ಅಪ್ತಸಹಾಯಕ ಮಹದೇವ್, ನವೀನ್ ಇತರರು ಇದ್ದರು.