ಫೇಸ್‌ಬುಕ್ ಲೈವ್‌ನಿಂದ 50ಕ್ಕೂ ಹೆಚ್ಚು ಮಂದಿಗೆ ನೌಕರಿ

sowraj new
Published on

ವೇಣುವಿನೋದ್ ಕೆ.ಎಸ್.ಮಂಗಳೂರು

ಕೋವಿಡ್ -19ನಿಂದ ಆರ್ಥಿಕ ಸ್ಥಿತಿ ಕುಸಿತ ಕಂಡಿದ್ದು, ಅನೇಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಸಾಮಾಜಿಕ ಕಾರ್ಯಕರ್ತರೊಬ್ಬರ ‘ಫೇಸ್‌ಬುಕ್ ಲೈವ್’ ಕನಿಷ್ಠ 50 ಮಂದಿಗೆ ಉದ್ಯೋಗ ಕೊಡಿಸಿದೆ!

ಹಲವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಸೌರಜ್ ಮಂಗಳೂರು, ಮೂರು ದಿನಗಳ ಹಿಂದೆ ತಮ್ಮ ಫೇಸ್‌ಬುಕ್ ಪುಟದ ಮೂಲಕ ಐದು ನಿಮಿಷಗಳ ಲೈವ್ ನೀಡಿದ್ದರು. ಆ ಮೂಲಕ ಯಾವ ರೀತಿ ಜಿಲ್ಲೆಯಲ್ಲಿ ಯುವಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ವಿವರಿಸಿದ್ದರು.

‘ವಿಜಯವಾಣಿ’ ಜತೆ ಮಾತನಾಡಿದ ಸೌರಜ್, ನೌಕರಿ ಇಲ್ಲದೆ ಎಲ್ಲರೂ ಸೋತಿದ್ದಾರೆ. ನನಗೆ ಕರೆ ಮಾಡಿ ಕೆಲವರು ಕೆಲಸ ಇದೆಯೇ? ಡ್ರೈವರ್, ಹೆಲ್ಪರ್ ಕೆಲಸ ಇದೆಯೇ ಎಂದು ಕೇಳ್ತಿದ್ರು, ಹಾಗಾಗಿ ಲೈವ್ ಆಗಿ ಕೆಲವು ವಿಚಾರ ಹೇಳಿಕೊಂಡೆ, ಕನಿಷ್ಠ 10 ಮಂದಿಗಾದರೂ ಕೆಲಸ ಸಿಕ್ಕಿದರೆ ಸಾಕು ಎಂಬ ಉದ್ದೇಶವಿತ್ತು. ಆದರೆ ವಿಡಿಯೋ ವೈರಲ್ ಆಗಿ, 91 ಸಾವಿರ ಮಂದಿ ವೀಕ್ಷಿಸಿದ್ದಾರೆ, 1200ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, ಕನಿಷ್ಠ 50 ಮಂದಿಗೆ ಕೆಲಸ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಲೈವ್ ನೋಡಿದವರು ಕಮೆಂಟ್ ಮಾಡಿ ತಮಗೆ ಬೇಕಾದ ಕೆಲಸದ ವಿಚಾರ, ಫೋನ್ ನಂಬರ್ ಹಾಕುವಂತೆ ಸೌರಜ್ ಹೇಳಿದ್ದರು. ಅನೇಕ ಮಂದಿ ಬೇಕಾದ ಕೆಲಸದ ಬಗ್ಗೆ ಹಾಕಿಕೊಂಡರೆ ಉದ್ಯೋಗದಾತರು ತಮಗೆ ಕೆಲಸದವರು ಬೇಕು ಎಂದು ಹಾಕಿಕೊಂಡರು. ಅನೇಕರು ನೇರವಾಗಿ ಅಲ್ಲಿರುವ ನಂಬರ್‌ಗೆ ಕರೆ ಮಾಡಿ ಮಾತನಾಡಿದರು. ಚಾಲಕರು, ಅಕೌಂಟ್ಸ್‌ನವರು, ಕಾಲ್‌ಸೆಂಟರ್, ಹೋಟೆಲ್, ಗಲ್ಫ್‌ನಲ್ಲಿ ಮನೆ ಸಹಾಯಕರು.. ಹೀಗೆ ವಿವಿಧ ರೀತಿಯ ಕೆಲಸಗಳನ್ನು ಪಡೆದುಕೊಂಡಿದ್ದಾರೆ.

ಮುಂಬೈನಲ್ಲಿ ಹೋಟೆಲ್‌ಗಳಲ್ಲಿ ಉತ್ತರ ಭಾರತದವರು ಇಲ್ಲದೆ ಜನರ ಅಗತ್ಯವಿದೆ, ಅನೇಕರು ಅಲ್ಲಿಗೆ ತೆರಳಿದ್ದಾರೆ. ಒಬ್ಬ ಯುವಕ 6 ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲಿದ್ದ, ಆತನಿಗೆ ಬೆಳಗಾವಿಯ ಹೋಟೆಲ್‌ನಲ್ಲಿ ಕೆಲಸ ಆಗಿದೆ. ಅವರೀಗ ಅಲ್ಲಿಗೆ ತೆರಳಿದ್ದಾರೆ. ಸೆಕೆಂಡ್ ಪಿಯು ಆದವರಿಗೆ ಕಾಲ್‌ಸೆಂಟರ್‌ಗಳಲ್ಲಿ ಸಂದರ್ಶನಕ್ಕೆ ಕರೆದಿದ್ದಾರೆ ಎಂದರು.

ಕೆಲಸ ಇದೆ. ಆದರೆ ಕೆಲವರಿಗೆ, ಅದರಲ್ಲೂ ಗಲ್ಫ್‌ನಿಂದ ಮರಳಿದ ಅನೇಕರಿಗೆ 15-20 ಸಾವಿರ ಸಂಬಳದ ಕೆಲಸ ಇಷ್ಟ ಇಲ್ಲ. ನನಗೆ ಕರೆ ಮಾಡಿದವರಿಗೆ, ಮನೆಯಲ್ಲಿ ಕುಳಿತುಕೊಳ್ಳುವ ಬದಲು ಸದ್ಯದ ಮಟ್ಟಿಗೆ ಸಿಗುವ ಕೆಲಸಕ್ಕೆ ಸೇರಿಕೊಳ್ಳಿ, ಆರ್ಥಿಕ ಚೇತರಿಕೆ ಬಳಿಕ ಮತ್ತೆ ಕೆಲಸ ಬದಲಾವಣೆ ಮಾಡಬಹುದು ಎಂದು ಹೇಳಿದ್ದೇನೆ. ಫೇಸ್‌ಬುಕ್ ಲೈವ್ ನೀಡಿದ್ದು ಸಾರ್ಥಕ ಎನಿಸಿದೆ. ಎಷ್ಟೋ ಮಂದಿಗೆ ಸಹಾಯವಾಗಿದೆ.

ಸೌರಜ್ ಮಂಗಳೂರು, ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net