

ವಿಜಯಪುರ:ಶಾಲೆಯ ಪರೀಕ್ಷೆ ಒಂದೇ ಮಕ್ಕಳ ಭವಿಷ್ಯ ನಿರ್ಧರಿಸಲಾರದು. ಇದು ಜೀವನ ಪರೀಕ್ಷೆಯಲ್ಲ. ವಿದ್ಯಾರ್ಥಿಗಳು ದೈಹಿಕ, ಮಾನಸಿಕವಾಗಿ ಕುಗ್ಗದೇ ಉತ್ಸಾಹದಿಂದ ಶಾಲಾ ಪರೀಕ್ಷೆ ಎದುರಿಸಿ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕವಲಗಿ ಹೇಳಿದರು.
ಶನಿವಾರ ನಗರದ ಎಕ್ಸಲಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಮುನ್ನಾವರ ಎಸ್. ಬೇಪಾರಿ ಪರೀಕ್ಷೆ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆ ಅವರ ಮನೆಗೆ ತೆರಳಿ ವಿದ್ಯಾರ್ಥಿನಿಗೆ ಸಿಹಿ ತಿನ್ನಿಸಿ, ಬ್ರೆಡ್, ಹಣ್ಣು-ಹಂಪಲ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿ, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದರು.
ಪರೀಕ್ಷೆ ಆತಂಕದಿಂದ ಆರೋಗ್ಯ ಹಾಳುಮಾಡಿಕೊಳ್ಳಬಾರದು ಮೂರು ತಾಸಿನ ಪರೀಕ್ಷೆಗಿಂತ ನೂರು ವರ್ಷದ ಬದುಕು ಮುಖ್ಯ. ದ್ವಿತೀಯ ಪಿಯು ಪರೀಕ್ಷೆ ಭಯ ಮಕ್ಕಳ ಹತ್ತಿರವೂ ಸುಳಿಯದಂತೆ ಪಾಲಕರಾದಿಯಾಗಿ ಎಲ್ಲರೂ ನೋಡಿಕೊಳ್ಳೋಣ. ಯಾವುದಕ್ಕೂ ಚಿಂತೆ ಬೇಡ. ನಮ್ಮ ಇಡೀ ತಂಡ ವಿದ್ಯಾರ್ಥಿನಿಯ ಜೊತೆಗೆ ಇರುತ್ತದೆ ಎಂದು ಭರವಸೆಯ ಮಾತುಗಳನ್ನು ಹೇಳಿ ವಿದ್ಯಾರ್ಥಿನಿಗೆ ಧೈರ್ಯ ತುಂಬಿದರು.
ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ವಿದ್ಯಾರ್ಥಿನಿ ತಂದೆ ಸಾಧಿಕ ಬಿ. ಬೇಪಾರಿ ಉಪಸ್ಥಿತರಿದ್ದರು. ಸಂಸ್ಥೆ ಅಧ್ಯಕ್ಷರ ಭರವಸೆ ಮತ್ತು ಪ್ರೀತಿಯ ನುಡಿಗೆ ಬೇಪಾರಿ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.