

ಕೋಲಾರ : ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ, ಅದನ್ನು ಆತ್ಮಸ್ಥೆ$ರ್ಯದಿಂದ ಎದುರಿಸಿದಾಗ ಅರ್ಥ ಬರುತ್ತದೆ ಎಂದು ಜಿಪಂ ಸಿಇಒ ಡಾ.ಪ್ರವಿಣ್ ಪಿ.ಬಾಗೇವಾಡಿ ಹೇಳಿದರು.
ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸಿಸಿಟಿವಿ ಇನ್ಸ್ಟಾಲೇಷನ್ ಮತ್ತು ಸರ್ವೀಸ್ ಹಾಗೂ ಲಘು ವಾಹನಾ ಚಾಲನಾ ತರಬೇತಿ ಮತ್ತು ಎಂಬ್ರಾಯಿಡರಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಸ್ವ ಉದ್ಯೋಗವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಕ್ಷೇತ್ರ. ಮಾರುಕಟ್ಟೆ ಹಾಗೂ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಉತ್ಪನ್ನಗಳಿಗೆ ಸಂಬಂಧಿಸಿದ ಉದ್ಯಮಗಳನ್ನು ಆರಂಭಿಸಿದರೆ ಆರ್ಥಿಕವಾಗಿ ಲಾಭ ಮಾಡಬಹುದು ಎಂದು ಸಲಹೆ ನೀಡಿದರು.
ಮಹಿಳೆಯರು ಕೂಡ ಶಿಕ್ಷಣ, ಉದ್ಯೋಗ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗಗಳಲ್ಲೂ ಸಾಧನೆ ಮಾಡಿದ್ದಾರೆ. ಸ್ವ ಉದ್ಯೋಗದಲ್ಲೂ ಕೂಡ ಅಭಿವೃದ್ಧಿಯಾಗಲು ಮಹಿಳೆಯರಿಗೆ ಹಲವು ಅವಕಾಶಗಳಿವೆ. ಶ್ರದ್ಧೆ, ಆಸಕ್ತಿ, ಶ್ರಮ ಇದ್ದರೆ ಸಾಧನೆ ಮಾಡಲು ಕಷ್ಟವಲ್ಲ ಎಂದರು.
ಸಿಸಿಟಿವಿ, ಎಂಬ್ರಾಯಿಡರಿ ಮತ್ತು ಲಘುವಾಹನ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳು, ಆ ವೃತ್ತಿಗಳಲ್ಲಿ ಬೆಳೆಯಲು ಸದಾ ಕಾಲ ಪ್ರಯತ್ನಿಸಬೇಕೆ ಹೊರತು ಸಾಧನೆ ಮಾಡುವ ಛಲವನ್ನು ಅರ್ಧದಲ್ಲಿ ಕೈ ಬಿಡಬಾರದು. ಪೂರ್ಣ ಪ್ರಮಾಣದಲ್ಲಿ ಕಲಿಯುವತನಕ ತರಬೇತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹದೇವ್ ಜೋಶಿ ಮಾತನಾಡಿ, ಸ್ವ ಉದ್ಯೋಗ ಆರಂಭಿಸಲು ಆಸಕ್ತಿ ಇರುವವರಿಗೆ ಪಿಎಂಇಜಿಪಿ, ಮುದ್ರಾ ಸೇರಿದಂತೆ ವಿವಿಧ ನಿಗಮಗಳ ಮೂಲಕ ಹಲವು ಯೋಜನೆಗಳು ಜಾರಿಯಲ್ಲಿದ್ದು, ಇವುಗಳನ್ನು ಬಳಸಿಕೊಂಡು ಸ್ವ ಉದ್ಯೋಗ ಆರಂಭಿಸಬಹುದು ಎಂದು ತಿಳಿಸಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ಸಿ.ಯಲ್ಲೇಶ್ ಮಾತನಾಡಿ, ಮಹಿಳೆಯರು ಯಾವುದೇ ಕಾರಣಕ್ಕೂ ಕೀಳರಿಮೆ ಪಡದೆ ಅಂದುಕೊಂಡ ಗುರಿ ತಲುಪುವ ಕಡೆ ಮಾತ್ರ ಗಮನ ಕೇಂದ್ರಿಕರಿಸಬೇಕು ಎಂದು ಹೇಳಿದರು.