

ಅರಸೀಕೆರೆ: ವಿದ್ಯಾರ್ಥಿಗಳು ಒತ್ತಡ ಮತ್ತು ಆತಂಕಕ್ಕೆ ಒಳಗಾಗದೆ ಪರೀಕ್ಷೆ ಎದುರಿಸಿದಲ್ಲಿ ನಿಶ್ಚಿತವಾಗಿ ಗುರಿ ತಲುಪಬಹುದು ಎಂದು ಶಾಂತಿನಿಕೇತನ ಪಬ್ಲಿಕ್ ಶಾಲೆಯ ಚೇರ್ಮನ್ ಎ.ಬಿ.ಗುರುಸಿದ್ದೇಶ್ ಹೇಳಿದರು.
ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಿ ಮಾತನಾಡಿದರು. ಹತ್ತನೇ ತರಗತಿ ಶೈಕ್ಷಣಿಕವಾಗಿ ಮೊದಲ ಮೈಲುಗಲ್ಲು ಎಂದೇ ಪರಿಗಣಿತವಾಗಿದೆ. ಭಯ, ಆತಂಕದಿಂದ ದೂರವಿದ್ದು ಶ್ರದ್ಧೆ, ಆಸಕ್ತಿ ಹಾಗೂ ಪರಿಶ್ರಮದಿಂದ ಪರೀಕ್ಷೆ ಬರೆಯಲು ಸಂಕಲ್ಪ ಮಾಡಿದರೆ ಮಾತ್ರವೇ ನಿಶ್ಚಿತ ಗುರಿ ತಲುಪಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಆಡಳಿತಾಧಿಕಾರಿ ಸುರೇಖಾ ಮಾತನಾಡಿ, ಏಕಾಗ್ರತೆ ಮತ್ತು ಸತತ ಅಧ್ಯಯನ ಯಶಸ್ಸಿನ ಗುಟ್ಟಿನ ಸೂತ್ರ ತಿಳಿದು ಪರೀಕ್ಷಾ ಸಿದ್ಧತೆ ಮಾಡಿಕೊಳ್ಳುಬೇಕು. ಜತೆಗೆ ಕಲಿತ ಶಾಲೆ, ಶಿಕ್ಷಕರು ಹಾಗೂ ಪಾಲಕರಿಗೆ ಗೌರವ ಬರುವಂತೆ ಫಲಿತಾಂಶ ತರುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ವಿವಿಧ ಆಟೋಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಲಾಯಿತು. ವಕೀಲ ನಿಲೇಶ್, ಪತ್ರಕರ್ತ ಮೋಹನ್‌ಕುಮಾರ್, ಹರೀಶ್, ರಘು, ಕುಮಾರ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.