ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

Face the exam with confidence.
Face the exam with confidence.
Published on

ಲೋಕಾಪುರ: ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಜತೆಗೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಸಾಧನೆಯ ಶಿಖರ ಏರಲು ಸಾಧ್ಯ ಎಂದು ಮಹಾಲಿಂಗಪುರದ ಕೆಎಲ್‌ಇ ಕಾಲೇಜು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.

ಪಟ್ಟಣದ ಲೋಕೇಶ್ವರ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ರಾಜಾ ಭೈರವಸಿಂಹ ಘೋರ್ಪಡೆ ಪ್ರೌಢಶಾಲೆ ಹಾಗೂ ಲೋಕೇಶ್ವರ ಶಿಕ್ಷಣ ಸಮಿತಿಯ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 7ನೇ ತರಗತಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭಕೋರುವ ಹಾಗೂ ಪಠ್ಯೇತರ ಚಟುವಟಿಕೆ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿ ಅದರ ಸಾಧನೆಗೆ ನಿರಂತರವಾಗಿ ಶ್ರಮವಹಿಸಿದರೆ ಉನ್ನತ ಸ್ಥಾನ ಪಡೆಯಬಹುದು. ಪಠ್ಯದ ಜತೆಗೆ ದಿನ ಪತ್ರಿಕೆಗಳು, ಕಥೆ, ಕಾದಂಬರಿ, ಸಣ್ಣ ಕಥೆಗಳು ಸೇರಿ ಆಸಕ್ತಿದಾಯಕ ಪುಸ್ತಕಗಳನ್ನು ಓದುವ ಹವ್ಯಾಸವನ್ನಾಗಿ ಮಾಡಿಕೊಂಡು ಸ್ವಾಮಿ ವಿವೇಕಾನಂದರಂತೆ ಮಹಾನ್ ಸಾಧಕರಾಗಬೇಕು ಎಂದರು.

ಸಂಸ್ಥೆ ಖಜಾಂಜಿ ಹಾಗೂ ನಿವೃತ್ತ ಪ್ರಾಚಾರ್ಯ ಡಿ.ಎಂ. ತುಬಾಕಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಸಮಾಜದ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದರು.

ಮಹಾಲಿಂಗಪುರದ ಕೆಎಲ್‌ಇ ಕಾಲೇಜು ಉಪನ್ಯಾಸಕ ಶಿವಲಿಂಗ ಸಿದ್ನಾಳ, ಪತ್ರಕರ್ತ ಸಲೀಮ ಕೊಪ್ಪದ ಹಾಗೂ ಪಠ್ಯೇತರ ಚಟುವಟಿಕೆ ನಡೆಸಲು ಧನಸಹಾಯ ನೀಡಿದ ಪ್ರಥಮ ದರ್ಜೆ ಗುತ್ತಿಗೆದಾರ ಕಾಶಿಲಿಂಗ ನಿರ್ವಾಣಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಸಂಸ್ಥೆ ಉಪಾಧ್ಯಕ್ಷ ಗಿರೀಶ ಕೊಪ್ಪದ, ಸದಸ್ಯ ಎಸ್.ಟಿ. ಬುದ್ನಿ, ಪ್ರಭಾರಿ ಮುಖ್ಯಾಧ್ಯಾಪಕ ಎಸ್.ಎ್. ನಾಯಕ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಎಸ್.ಎಂ. ಹಡಪದ, ಶಿಕ್ಷಕ ಎ.ಕೆ. ಚನ್ನಪ್ಪಗೌಡರ, ಪತ್ರಕರ್ತರಾದ ಸಿದ್ದು ಹೂಗಾರ, ಈರಪ್ಪ ಸಾಳಗುಂದಿ ಮತ್ತಿತರರಿದ್ದರು. ಶಿಕ್ಷಕ ಎಚ್.ಆರ್. ಕನಕಪ್ಪನವರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net