

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರ್ಥಿಕವಾಗಿ ಹಿಂದಳಿದವರೇ ಇಂದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಎಲ್ಲರೂ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಕಲಾ ಕಾಲೇಜಿನ ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಐಕ್ಯೂಎಸಿ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಅರ್ಥಶಾಸ್ತ್ರ ಸ್ಟಡಿ ಸರ್ಕಲ್ 2014-15ನೇ ಸಾಲಿನ ಶೈಣಿಕ ಕಾರ್ಯ ಚಟುವಟಿಕೆಗಳು ಮತ್ತು ಉದ್ಯಮಿ ರತನ್ ಟಾಟಾ ಅವರಿಗೆ ನುಡಿ ನಮನ ನಿಮಿತ್ತ ಗುರುವಾರ ಏರ್ಪಡಿಸಿದ್ದ "ರತನ್ ಟಾಟಾ ಒಬ್ಬ ಉದ್ಯಮಿ' ಸಾಕ್ಯಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಯನದಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಅರ್ಥಶಾಸ್ತ್ರ ಅಧ್ಯಯನದಿಂದ ಸರ್ಕಾರಿ ಹಾಗೂ ಅರೆ ಸರ್ಕಾರಿ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚಿವೆ. ವಿಷಯದ ಜತೆಗೆ ದಿನಪತ್ರಿಕೆಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು. ರತನ್ ಟಾಟಾ ವ್ಯಕ್ತಿತ್ವ ನಮಗೆ ಮಾದರಿ. ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗದೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಐ.ಸಿ.ಮುಳಗುಂದ ಮಾತನಾಡಿ, ಜೀವನದಲ್ಲಿ ಯಶಸ್ಸು ಸಿಗಲು ಕಠಿಣ ಅಧ್ಯಯನ ಮಾಡಬೇಕು. ಅರ್ಥಶಾಸ್ತ್ರ ಓದಿದವರಿಗೆ ಕಾರ್ಪೊರೇಟ್ ಕಂಪನಿಗಳಲ್ಲಿ ಹೆಚ್ಚು ಅವಕಾಶಗಳಿವೆ. ಸಮಯ ಹಾಳು ಮಾಡದೆ ನಿಮ್ಮ ಅಧ್ಯಯನದತ್ತ ಗಮನ ಹರಿಸಬೇಕು ಎಂದರು.
ಪ್ರಾಧ್ಯಾಪಕರು, ಇತರರು ಇದ್ದರು. ಡಾ. ಡಾ.ಅನ್ನಪೂರ್ಣ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು.