ಆತ್ಮವಿಶ್ವಾಸದಿಂದ ಬದುಕಿನ ಸವಾಲುಗಳನ್ನು ಎದುರಿಸಿ : ಡಾ.ಡಿ.ಎಸ್. ಗುರು

suttur
Published on

ಮೈಸೂರು: ಆತ್ಮವಿಶ್ವಾಸದಿಂದ ಬದುಕಿನ ಸವಾಲುಗಳನ್ನು ಎದುರಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಕರೆ ನೀಡಿದರು.

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗಾಗಿ ಭಾನುವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ‘ಸವಾಲುಗಳನ್ನು ಎದುರಿಸುವುದು’ ವಿಷಯ ಕುರಿತು ಮಾತನಾಡಿ, ಬದಲಾವಣೆ ಜಗದ ನಿಯಮ ಎಂಬಂತೆ ಇಂದಿನ ಯುಗದಲ್ಲಿ ವಿಜ್ಞಾನದ ಆವಿಷ್ಕಾರಗಳೊಂದಿಗೆ ಜಗತ್ತು ಅನೇಕ ಬದಲಾವಣೆಗೆ ಒಳಪಟ್ಟಿದೆ. ಈ ಬದಲಾವಣೆ ಮಾನವನ ಜೀವನ ಶೈಲಿಯನ್ನು ಸುಲಭಗೊಳಿಸಿದೆ. ಪ್ರಕೃತಿಯೊಂದಿಗೆ ತಂತ್ರಜ್ಞಾನ ಮೇಳೈಸಿದಾಗ ಉತ್ತಮ ಆವಿಷ್ಕಾರಗಳು ಸಾಧ್ಯವಾಗುತ್ತವೆ. ಆ ಸಂದರ್ಭದಲ್ಲಿ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯುವ ಕಲೆಯನ್ನು ಕರಗತಮಾಡಿಕೊಳ್ಳಬೇಕು.ಉತ್ತಮ ವ್ಯಕ್ತಿತ್ವ, ಆತ್ಮವಿಶ್ವಾಸ, ನೈತಿಕ ಪ್ರಜ್ಞೆ ಹಾಗೂ ಪ್ರಾಯೋಗಿಕ ಅನುಭವಗಳನ್ನು ರೂಪಿಸಿಕೊಂಡು ಜೀವನದ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಎಂದರು.

ವಿದ್ಯಾವರ್ಧಕ ತಾಂತ್ರಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಸದಾಶಿವೇಗೌಡ ಮಾತನಾಡಿ, ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಮ್ಮ ಅಸ್ಥಿತ್ವ ಉಳಿಸಿಕೊಳ್ಳಬೇಕಾದರೆ ನಾವೀನ್ಯತೆಯೊಂದಿಗೆ ಮುನ್ನಡೆಯುವುದು ಅವಶ್ಯಕ. ನಮ್ಮ ಆಹಾರ ಉಡುಗೆ, ತೊಡುಗೆ ಆಚರಣೆಗಳಲ್ಲಿ ಅನೇಕ ನಾವೀನ್ಯತೆಗಳನ್ನು ಕಾಣಬಹುದು. ಸೃಜನಶೀಲ ಆಲೋಚನೆಯೊಂದಿಗೆ ನಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಬೇಕು ಎಂದರು.

ಪ್ರಪಂಚದ ಪ್ರಖ್ಯಾತ ಕಂಪನಿಗಳು ದೂರದೃಷ್ಟಿಯಿಂದ ನಾವೀನ್ಯತೆ ಅಳವಡಿಸಿಕೊಂಡು ಉತ್ಪಾದನಾ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದೆ. ಅದರೆ ಕೆಲವು ಕಂಪನಿಗಳು ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳದೆ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುವುದನ್ನು ಕಾಣಬಹುದು. ನಾವು ಸೋಲುಗಳನ್ನು ಒಪ್ಪಿಕೊಂಡು ಅವುಗಳಿಂದ ಪಾಠಕಲಿತು ಗೆಲುವಿನ ಮೆಟ್ಟಿಲನ್ನು ಏರಬೇಕು ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net