

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯವು ಬಿ.ಎಡ್., ಎಂ.ಎಡ್., ಎಂಪಿ. ಎಡ್. ವಿದ್ಯಾರ್ಥಿಗಳಗೆ ಫೇಸ್ ಆ್ಯಂಡ್ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲು ಆದೇಶಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಈ ಹೊಸ ನಿಯಮಾವಳಿ ಸ್ನಾತಕ- ಸ್ನಾತಕೋತ್ತರ ಪದವಿಗಳಿಗೂ ಏಕಿಲ್ಲ ಎಂಬ ಪ್ರಶ್ನೆ ಮೂಡಿಸಿದೆ.
ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಬಿ.ಎಡ್ ಸಂಯೋಜಿತ ಹಾಗೂ ಘಟಕ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಈ ಕ್ರಮ ಜಾರಿಗೊಳಿಸಲಾಗುತ್ತಿದೆ. ಕೆಲ ತಿಂಗಳ ಹಿಂದೆ ನಡೆದ ಸಿಂಡಿಕೇಟ್ ಸಭೆಯ ಸುಧಾರಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಪ್ರಾಚಾರ್ಯರಿಗೆ ಸುತ್ತೋಲೆ ಮೂಲಕ ತಿಳಿಸಲಾಗಿದೆ. ವಿಶ್ವವಿದ್ಯಾಲಯದ ಈ ಕ್ರಮಕ್ಕೆ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಗಳ ವಿರೋಧ ವ್ಯಕ್ತವಾಗಿದೆ.
* ಸುತ್ತೋಲೆಯಲ್ಲಿ ಏನಿದೆ...?
ಬಿ.ಎಡ್ ಕಾಲೇಜುಗಳ ಸಂಯೋಜನೆ ಕುರಿತು ಸ್ಥಾನಿಕ ತನಿಖಾ ಸಮಿತಿಯು ಭೇಟಿ ನೀಡಿದ ಸಂದರ್ಭದಲ್ಲಿ ಎನ್‌ಸಿಟಿಇ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಿ ವರದಿಯಲ್ಲಿ ಸೇರ್ಪಡೆಗೊಳಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳ ಫೇಸ್ ಆ್ಯಂಡ್ ಬಯೋಮೆಟ್ರಿಕ್, ಸಿಸಿ ಟಿವಿ ದೃಶ್ಯಾವಳಿಯ ಹಾಜರಾತಿಯನ್ನು ಪರೀಕ್ಷೆಯ ಒಂದು ವಾರ ಮೊದಲು ಮೌಲ್ಯಮಾಪನ ಕುಲಸಚಿವರಿಗೆ ಸಲ್ಲಿಸಬೇಕು. ಇದಕ್ಕೆ ತಪ್ಪಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಿ.ಎಡ್., ಎಂ.ಎಡ್., ಎಂಪಿ. ಎಡ್. ಪ್ರಾಯೋಗಿಕ ತರಬೇತಿ ಆಧಾರಿತ ಕೋರ್ಸ್ಗಳಾಗಿರುವುದರಿಂದ ಹಾಜರಾತಿ ಕಡ್ಡಾಯಗೊಳಿಸಲು ಈ ಕ್ರಮ ಅನುಸರಿಸಲಾಗುತ್ತಿದೆ. ತರಬೇತಿ ಆಧಾರಿತ ಕೋರ್ಸ್ಗಳ ಎಂಬ ನೆಪವೊಡ್ಡಿ ಖಾಸಗಿ ಕಾಲೇಜುಗಳ ಮೇಲೆ ಸವಾರಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಸ್ನಾತಕ- ಸ್ನಾತಕೋತ್ತರ ಶಿಕ್ಷಣಕ್ಕೂ ಈ ನಿಯಮ ಪಾಲಿಸಬೇಕು. ಏಕೆಂದರೆ ಪ್ರವೇಶಾತಿ ಪಡೆಯುವ ಅದೆಷ್ಟೋ ವಿದ್ಯಾರ್ಥಿಗಳು ನೇರವಾಗಿ ಪರೀಕ್ಷೆಗೆ ಮಾತ್ರ ಹಾಜರಾಗುವ ಪರಿಪಾಠವಿದೆ. ಅಲ್ಲಿ ಬಯೋಮೆಟ್ರಿಕ್ ಹಾಜರಾತಿ ಇಲ್ಲದಿರುವುದರಿಂದ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಖಾಸಗಿ ಕಂಪನಿಗಳು, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಆದ್ದರಿಂದ ಎಲ್ಲ ಕೋರ್ಸ್ಗಳಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮಾಡಬೇಕು ಎಂದು ಹೆಸರು ಹೇಳಲಿಚ್ಚಿಸದ ಸಂಸ್ಥೆಯ ಮುಖ್ಯಸ್ಥರೊಬ್ಬರು `ವಿಜಯವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಎಂಎ, ಎಂಎಸ್.ಸಿಯ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಗೈರಾಗಿರುತ್ತಾರೆ. ಅಧೀನದ ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇರದೆ ಪಾಠ ಬೋಧನೆ ನಡೆಯುವುದಿಲ್ಲ. ವಿಶ್ವವಿದ್ಯಾಲಯದ ನಿಯಮ ಕಾಲೇಜುಗಳ ನಡುವೆ ಪಕ್ಷಪಾತ ಧೋರಣೆ ಅನುಸರಿಸುವಂತಿದೆ. ಈ ಕ್ರಮ ವಿರೋಧಿಸಿ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಖಾಸಗಿ ಬಿ.ಎಡ್ ಕಾಲೇಜು ಆಡಳಿತ ಮಂಡಳಿಯವರು ಎಚ್ಚರಿಕೆ ನೀಡಿದ್ದಾರೆ.
ಪ್ರಾಯೋಗಿಕ ತರಬೇತಿ ಆಧಾರಿತ ಕೋರ್ಸ್ಗಳಿಗೆ ಹಾಜರಾತಿ ಮುಖ್ಯ. ಕೆಲ ವಿದ್ಯಾರ್ಥಿಗಳು ಬಿ.ಎಡ್ ಕೋರ್ಸ್ಗೆ ಪ್ರವೇಶಾತಿ ಪಡೆದು ಕಾಲೇಜುಗಳಿಗೆ ಹೋಗುವುದಿಲ್ಲ. ತರಬೇತಿ ಇಲ್ಲದೆ ಶಿಕ್ಷಕರಾದವರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಫೇಸ್ ಆ್ಯಂಡ್ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
- ಡಾ. ನಿಜಲಿಂಗಪ್ಪ ಮಟ್ಟಿಹಾಳ, ಕವಿವಿ ಮೌಲ್ಯಮಾಪನ ಕುಲಸಚಿವ