

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ನಾಡಿಗೆ ಹೊಸ ಮಾರ್ಗದ ಮೂಲಕ ಧಾಮಿರ್ಕ, ಆಧ್ಯಾತ್ಮಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಕ್ರಾಂತಿಗೆ ಕಾರಣವಾದ ಮತ್ತು 12ನೇ ಶತಮಾನದ ಬಸವಾದಿ ಪ್ರಮಥರು ಬರೆದ ವಚನಗಳನ್ನು ರಕ್ಷಿಸಿ. ನಾಡಿಗೆ ಪರಿಚಯಿಸಿ ಪ್ರಚುರಪಡಿಸಿದ್ದು ಶರಣ ಫ .ಗು.ಹಳಕಟ್ಟಿ ಅವರು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಚನ ಪಿತಾಮಹ ಫ. ಗು. ಹಳಕಟ್ಟಿ ಜನ್ಮದಿನದ ವಚನ ಸಾಹಿತ್ಯ ಸಂರಕ್ಪಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಫ .ಗು.ಹಳಕಟ್ಟಿ ಅವರು ಕನ್ನಡ ನಾಡಿನ ಮನೆಮನೆಗೆ ಹೋಗಿ ವಚನದ ಕಟ್ಟುಗಳನ್ನು ಸಂಗ್ರಹಿಸಿ, ಶಿವಾನುಭವ ಪತ್ರಿಕೆ ಮೂಲಕ ಪ್ರಕಟಿಸಿದರು. ಅವುಗಳ ಮೇಲೆ ಅಂದಿನ ವಿದ್ವಾಂಸರಿಂದ, ಸಮಾಜದ ಮುಖಂಡರಿಂದ, ಸ್ವಾಮೀಜಿಗಳಿಂದ ವಿಶ್ಲೇಷಣೆ, ಅಭಿಪ್ರಾಯ ಬರೆಸಿದರು. ಡಾ. ಫ .ಗು.ಹಳಕಟ್ಟಿ ಅವರ ಪರಿಶ್ರಮದಿಂದಾಗಿಯೇ ವಚನ ಸಾಹಿತ್ಯ ಉಳಿದು, ಬೆಳೆದು ಬಂದಿದೆ ಎಂದರು.
ಡಾ. ಫ .ಗು.ಹಳಕಟ್ಟಿ ಅವರು ತಮ್ಮ ಜೀವನದುದ್ದಕ್ಕೂ ವಚನ ಸಾಹಿತ್ಯದ ಸಂಶೋಧನೆ, ಪ್ರಕಟಣೆಗಾಗಿ ಹಗಲಿರುಳು ಶ್ರಮಿಸಿದರು. ಸಮಾಜಕ್ಕೆ ಹೊಸ ಶರಣ ಮಾರ್ಗ ತೋರಿದರು ಎಂದರು.
ಡಾ. ಫ .ಗು.ಹಳಕಟ್ಟಿ ಜೀವನ ಮತ್ತು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಕುರಿತು ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ವಿಶೇಷ ಉಪನ್ಯಾಸ ನೀಡಿದರು. ಈಶ್ವರ ಕಡ್ಲಿಮಟ್ಟಿ, ಬಸವರಾಜ ಕೊಂಗಿ, ಸದಾನಂದ ಶಾಂತಪ್ಪ ಹಳಕಟ್ಟಿ, ಮುಖಂಡರು, ಹಳಕಟ್ಟಿ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.