

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಚರಂಡಿ, ನೀರಿನ ತೊಟ್ಟಿಗಳನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಡೆಂಘೆ, ಮಲೇರಿಯಾ ಹರಡುವ ಸೊಳ್ಳೆಗಳು ನಾಶವಾಗುತ್ತವೆ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಹೇಳಿದರು.
ತಾಲೂಕಿನ ನೂಲ್ವಿ ಗ್ರಾಮದ ಎಸ್.ಜೆ.ಆರ್. ಸಮೂಹ ಸಂಸ್ಥೆಯ ಸಭಾಭವನದಲ್ಲಿ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಡೆಂಘೆ ಜಾಗೃತಿಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಗಾರು ಮಳೆಯಿಂದ ಮನೆಗಳ ಸುತ್ತ ನೀರು ನಿಲ್ಲುತ್ತಿದೆ. ಮನೆಗಳ ತೊಟ್ಟಿಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಅವುಗಳಲ್ಲಿ ವಿವಿಧ ರೀತಿಯ ಸೊಳ್ಳೆಗಳು ಮೊಟ್ಟೆ ಇಟ್ಟು, ತಮ್ಮ ಸಂತಾನ ಅಭಿವೃದ್ಧಿ ಮಾಡಿಕೊಳ್ಳುತ್ತವೆ. ಅವುಗಳ ಕಡಿತದಿಂದ ಮಲೇರಿಯಾ, ಡೆಂಘೆಯಂತಹ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಹೀಗಾಗಿ ಡೆಂಘೆ, ಮಲೇರಿಯಾ ಕುರಿತು ಮುಂಜಾಗ್ರತೆ ವಹಿಸುವುದು ಮುಖ್ಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಡೆಂಘೆ ನಿಯಂತ್ರಣದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನೂಲ್ವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಶ್ರೀಕಾಂತ ಅವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ವಿಡಿಯೋ, ಪಿಪಿಟಿ ಹಾಗೂ ಜಾಗೃತಿ ಗೀತೆ, ಪ್ರಾತ್ಯಿಕ್ಷತೆಯ ಮೂಲಕ ಡೆಂಘೆ ಬಗ್ಗೆ ಅರಿವು ಮೂಡಿಸಿದರು.
ಹುಬ್ಬಳ್ಳಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಮಚಂದ್ರ ಹೊಸಮನಿ, ತಾಲೂಕು ವೈದ್ಯಾಧಿಕಾರಿ ಡಾ. ಹುಲಗೇಶ, ನೂಲ್ವಿ ಗ್ರಾಪಂ ಅಧ್ಯಕ್ಷೆ ಸಾವಿತ್ರಿ ತೆಂಬದಮನಿ, ಉಪಾಧ್ಯಕ್ಷ ಅಶೋಕ ಬುಳ್ಳನ್ನವರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ, ಚಂದ್ರಗೌಡ ಪಾಟೀಲ, ಜಗನ್ನಾಥ ಸಿದ್ದನಗೌಡ್ರ ಹಾಗೂ ಇತರರು ಇದ್ದರು.