

ಲಕ್ಷ್ಮೇಶ್ವರ: ಕಲ್ಯಾಣಕ್ರಾಂತಿಯ ನಂತರ ಚದುರಿ ಹೋಗಿದ್ದ ವಚನಗಳನ್ನು ಸಂಗ್ರಹಿಸಿ, ವಚನಗಳಿಗೆ ಪುನರ್ಜನ್ಮ ಕೊಟ್ಟಿದ್ದು ವಚನ ಪಿತಾಮಹ ಡಾ. ಫ.ಗು ಹಳಕಟ್ಟಿ. ಇವರು 20ನೇ ಶತಮಾನದ ವಚನ ಸಾಹಿತ್ಯದ ಶಿಖರಸೂರ್ಯ ಎಂದು ಸಾಹಿತಿ ಸಿ.ಜಿ. ಹಿರೇಮಠ ಹೇಳಿದರು.
ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕದಳಿ ಮಹಿಳಾ ವೇದಿಕೆ ಸಹಯೋದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಡಾ. ಫ.ಗು. ಹಳಕಟ್ಟಿ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ, ವಚನ ಪಿತಾಮಹ ಡಾ. ಫ. ಗು ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದರು. ಸ್ವಂತ ಮನೆ ಮಾರಾಟ ಮಾಡಿ ವಚನಗಳನ್ನು ಉಳಿಸುವ ಕೆಲಸ ಮಾಡಿದ್ದಾರೆ. ಕುವೆಂಪು, ಬೇಂದ್ರೆ ಸೇರಿ ಅನೇಕ ಶ್ರೇಷ್ಠ ಸಾಹಿತಿಗಳು ವಚನಗಳಿಂದ ಪ್ರೇರಣೆಗೊಂಡು ವಿಶ್ವ ಸಾಹಿತ್ಯಕ್ಕೆ ಕನ್ನಡದ ವಚನ ಸಾಹಿತ್ಯದ ಕೊಡುಗೆ ನೀಡುವಲ್ಲಿ ಫ.ಗು. ಹಳಕಟ್ಟಿ ಕಾರಣರಾಗಿದ್ದಾರೆ ಎಂದು ಹೇಳಿದರು.
ಬಡತನದಲ್ಲೇ ಜೀವನ ಸವೆಸಿದ ಹಳಕಟ್ಟಿಯವರು ಹಳ್ಳಿ, ಮಠ, ದೇವಾಲಯ, ಅನೇಕರ ಮನೆಯ ಜಗಲಿ ಮೇಲಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ತಾಳೆಗರಿ, ವಚನಗಂಟುಗಳನ್ನು ಹುಡುಕಿ, ಸಂಗ್ರಹಿಸಿ, ವಚನಸಾರ, ವಚನಶಾಸ್ತ್ರ ಸಾರ, ವಚನಧರ್ಮಸಾರ ಗ್ರಂಥ ಪ್ರಕಟಣೆ ಮಾಡುತ್ತಾರೆ. ಆದರೆ ಆ ಕಾಲದಲ್ಲಿ ಅವರಿಗೆ ಅಷ್ಟಾಗಿ ಸಹಾಯ, ಸಹಕಾರ ಸಿಗಲಿಲ್ಲ ಎಂಬುದು ವಿಷಾದದ ಸಂಗತಿ ಎಂದರು.
ಸೋಮೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಪುರಸಭೆ ಮಾಜಿ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಮಾತನಾಡಿದರು. ಶಸಾಪ ತಾಲೂಕಾಧ್ಯಕ್ಷ ಎಲ್.ಎಸ್. ಅರಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕದಳಿ ಮಹಿಳಾ ವೇದಿಕೆ ತಾಲೂಕಾಧ್ಯಕ್ಷೆ ನಿರ್ಮಲಾ ಅರಳಿ, ಶಾರದಾ ಬಟಗುರ್ಕಿ, ಇತರರಿದ್ದರು. ಮಾಲಾದೇವಿ ದಂಧರಗಿ, ಜಿ.ಎಸ್. ರಾಮಶೆಟ್ಟರ, ಗೌರಿ ಸಂಗಪ್ಪಶೆಟ್ಟರ ನಿರೂಪಿಸಿದರು.