ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡುಗೆ ಅಪಾರ

Halakatti's birthday was celebrated in Mysore.
Published on

ಮೈಸೂರು: ಡಾ. ಫ.ಗು. ಹಳಕಟ್ಟಿ ವಚನ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು. ಇಂತಹ ಮಹಾನ್ ವ್ಯಕ್ತಿಯ ಸಾಹಿತ್ಯವನ್ನು ಯುವ ಪೀಳಿಗೆ ಹೆಚ್ಚಾಗಿ ಓದಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಡಾ. ಫ.ಗು. ಹಳಕಟ್ಟಿ ವಚನ ಸಾಹಿತ್ಯ ಸಂರಕ್ಷಣೆಗೆ ಹಳಕಟ್ಟಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನುಷ್ಯನಿಗೆ ತಾಳ್ಮೆ ಅತ್ಯಂತ ಅಗತ್ಯ. ನಾವು ನಮ್ಮ ಸರದಿಗೋಸ್ಕರ ಕಾಯಬೇಕು. ಒಂದಲ್ಲಾ ಒಂದು ದಿನ ನಮಗೆ ಅವಕಾಶಗಳು ದೊರೆಯುತ್ತದೆ. ಆ ಅವಕಾಶವನ್ನು ಬಳಸಿಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ದೊರೆಯುವುದು ನಿಶ್ಚಿತ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಮಾತನಾಡಿ, ವಚನ ಸಾಹಿತ್ಯ ಸಂರಕ್ಷಣೆಗಾಗಿ ಯಾರಾದರೂ ಒಂದು ತಪಸ್ಸಿನ ರೀತಿಯಲ್ಲಿ ತಮ್ಮ ಜೀವನವನ್ನು ಗಂಧದ ರೀತಿಯಲ್ಲಿ ಸವೆಸಿದ್ದಾರೆ ಎಂದರೆ ಅದು ಡಾ. ಫ. ಗು ಹಳಕಟ್ಟಿ. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಹಲವು ಸಾಹಿತ್ಯ ಪ್ರಕಾರಗಳು ಇವೆ. ಹಳೆಗನ್ನಡ, ಚಂಪಾ ಸಾಹಿತಿಗಳು, ಷಟ್ಪದಿ, ರಗಳೆ ಆ ರೀತಿಯ ಸಾಹಿತ್ಯ ಪ್ರಕಾರಗಳನ್ನು ನಾವು ಅಧ್ಯಯನ ಮಾಡದಿದ್ದರೂ ಸಹ ಜನಸಾಮಾನ್ಯರ ಮಟ್ಟಕ್ಕೆ ಇಳಿದಂತಹ ಜನಸಾಮಾನ್ಯರ ಒಂದು ರಕ್ತದಲ್ಲಿ ಬೆರೆದಂತಹ ಒಂದು ಸಾಹಿತ್ಯ ಪ್ರಕಾರ ಎಂದರೆ ಅದು ವಚನ ಸಾಹಿತ್ಯ ಎಂದರು.

ವಚನಕಾರರು ಜನಮಾನಸದಲ್ಲಿ ಬೆರೆತು ವಚನಗಳನ್ನು ರಚನೆ ಮಾಡಿದ್ದಾರೆ. ವಚನಗಳ ನಾಲ್ಕು ಸಾಲುಗಳಲ್ಲಿ ಅಪಾರವಾದ ಅರ್ಥವನ್ನು ಒಳಗೊಂಡಿರುತ್ತವೆ. ನಾವು ವಚನಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳ ಅರ್ಥವನ್ನು ತಿಳಿದುಕೊಳ್ಳಬೇಕು. 12ನೇ ಶತಮಾನದಲ್ಲಿ ವಚನ ಕ್ರಾಂತಿ ಉಂಟಾಯಿತು. ಈ ಕನ್ನಡ ನೆಲವನ್ನು ಇಡೀ ವಿಶ್ವದಲ್ಲಿ ಒಂದು ವಿಶೇಷವಾದಂತಹ ಪ್ರಭಾವಳಿಯಲ್ಲಿ ನಿಲ್ಲಿಸಿದಂತಹ ಸಾಹಿತ್ಯ ಪ್ರಕಾರ ಎಂದರೆ ವಚನ ಸಾಹಿತ್ಯ ಎಂದು ತಿಳಿಸಿದರು.

ಡಾ. ಫ. ಗು ಹಳಕಟ್ಟಿ ವಚನ ಸಾಹಿತ್ಯ ಸಂರಕ್ಷಣೆಗೆ ಶ್ರಮಿಸದೆ ಹೋಗಿದ್ದರೆ ನಮಗೆ ವಚನಕಾರರ ಹಲವಾರು ವಚನಗಳು ದೊರೆಯುತ್ತಿರಲಿಲ್ಲ.ಎಲ್ಲೋ ಬೆರಳೆಣಿಕೆಯಷ್ಟು ವಚನಗಳು ಮಾತ್ರ ಸಿಗುತ್ತಿದ್ದವು. ತಮ್ಮ ಜೀವನವನ್ನೇ ತಪಸ್ಸಿನ ರೀತಿಯಲ್ಲಿ ವಚನಗಳನ್ನು ಸಂರಕ್ಷಣೆಗೆ ಅವರು ಮುಡಿಪಾಗಿಟ್ಟರು ಎಂದರು.

ಇಂದು ವಚನಗಳು ಜೀವನವನ್ನು ಕಟ್ಟು ಕೊಡುತ್ತಿವೆ. ನಮಗೆ ಬೇಸರವಾದರೆ ನಮ್ಮ ಭಾವನೆಗಳನ್ನು ವಚನಗಳ ಮೂಲಕ ವ್ಯಕ್ತಪಡಿಸುತ್ತೇವೆ. ವಚನಗಳು ಇಲ್ಲದೆ ನಮ್ಮ ಜೀವನ ಸಂಪೂರ್ಣಗೊಳಿಸಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ವಚನಗಳು ಬೆರೆತು ಹೋಗಿವೆ. ಹಳಕಟ್ಟಿ ಅವರ ಸಾಧನೆಯಿಂದ ಅವರು ಜೀವನದಲ್ಲಿ ಅವರು ಮಾಡಿದ ಸೇವೆ ಅದನ್ನು ನಾವೆಲ್ಲರೂ ಅನುಸರಿಸಬೇಕು. ಅವರು ಆದರ್ಶಗಳನ್ನು ನಾವು ಅನುಸರಿಸಿಕೊಳ್ಳಬೇಕು ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, 12ನೇ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸಿ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಮೊದಲು 50 ವಚನಕಾರರನ್ನು ಮಾತ್ರ ಗುರುತಿಸಲಾಗಿತ್ತು. ಹಳಕಟ್ಟಿ ಅವರ ಸಂಶೋಧನೆಯ ಫಲವಾಗಿ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತರಲು ಸಾಧ್ಯವಾಯಿತು ಎಂದರು.

ಮನೆಯ ಗೋಡೆಯಲ್ಲಿ, ಜಗುಲಿಯಲ್ಲಿ ತಾಳೆಗರಿ ರೂಪದಲ್ಲಿ ಇದ್ದ ವಚನಗಳನ್ನು ್ನಸಂಗ್ರಹಿಸಿ ಅವುಗಳನ್ನು ಮುದ್ರಿಸಿ ಕನ್ನಡಿಗರ ಹೃದಯ ಮಂದಿರಕ್ಕೆ ಮುಟ್ಟಿಸಿದವರು ಹಳಕಟ್ಟಿ ಅವರು. ವಚನ ಸಂಗ್ರಹ, ಸಂಪಾದನೆ, ಮುದ್ರಣ ಕಾರ್ಯ ಮಾಡಿ ವಚನ ಸಾಹಿತ್ಯಕ್ಕೆ ಜೀವ ತುಂಬಿದ ಮಹಾಪುರುಷ ಎಂದು ಬಣ್ಣಿಸಿದರು.

ಇಂದು ನಮ್ಮ ಸಮಾಜದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿರುವ ಅನೇಕ ಜಗದ್ಗುರುಗಳು, ಧರ್ಮಾಧಿಕಾರಿಗಳು, ಉದಾರ ದಾನಿಗಳೂ, ಧರ್ಮಾಭಿಮಾನಿಗಳು, ಉದ್ದಾಮ ಸಾಹಿತಿಗಳೂ ಇದ್ದಾರೆ. ಆದರೆ ಅವರೆಲ್ಲರಿಗಿಂತ ಇವರಿಗೆ ನಮ್ಮ ಹೃದಯದಲ್ಲಿ ಹೆಚ್ಚಿನ ಸ್ಥಾನವಿದೆಯೆಂದು ಹೇಳಲು ನಾವು ಹೆಮ್ಮೆಪಡುತ್ತೇವೆ ಎಂದು ತಿಳಿಸಿದರು.

ಹಳಕಟ್ಟಿ ಅವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅಷ್ಟೇ ಅಲ್ಲ ವಚನಗಳ ಗಾಯನಕ್ಕೂ ವ್ಯವಸ್ಥೆ ಮಾಡಿಸಿದರಲ್ಲದೆ ಶ್ರೇಷ್ಠ ಸಂಗೀತಕಾರರನ್ನು ವಚನ ಗಾಯನ ರೆಕಾರ್ಡಿಂಗ್‌ಗಾಘಿ ಮುಂಬಾಯಿಗೆ ಕಳುಹಿಸಿದ್ದರು. ಹೀಗೆ ವಚನ ಸಾಹಿತ್ಯದ ಪ್ರಸಾರ ಕಾರ್ಯವನ್ನು ಅವರು ಅವಿರತವಾಗಿ ಕೈಗೊಂಡರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ. ಡಿ. ಸುದರ್ಶನ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net