

ಮಡಿಕೇರಿ: ಚಲನಚಿತ್ರ ಬರೀ ಮನರಂಜನೆಯಲ್ಲ. ಅದೊಂದು ಸಮಾಜದಲ್ಲಿ ಬದಲಾವಣೆ ಮತ್ತು ಸುಧಾರಣೆ ತರುವ ಮಾಧ್ಯಮವಾಗಿದೆ. ಆ ನಿಟ್ಟಿನಲ್ಲಿ ಡಾ.ರಾಜ್‌ಕುಮಾರ್ ಅವರು ಕನ್ನಡ ನಾಡಿನ ಚಲನಚಿತ್ರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಕನ್ನಡಿಗರ ಕಣ್ಮಣಿಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಡಾ.ರಾಜ್ ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ.ರಾಜ್‌ಕುಮಾರ್ ಅವರು ಬೇಡರ ಕಣ್ಣಪ್ಪ, ಭಕ್ತ ಕನಕದಾಸ, ರಣಧೀರ ಕಂಠೀರವ, ಸತ್ಯ ಹರಿಶ್ಚಂದ್ರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾಯ, ಭಕ್ತ ಕುಂಬಾರ, ಮಯೂರ, ಬಬ್ರುವಾಹನ, ಭಕ್ತ ಪ್ರಹ್ಲಾದ, ಬಂಗಾರದ ಮುನುಷ್ಯ... ಹೀಗೆ ಹಲವು ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ಸದಾ ಇದ್ದಾರೆ. ಕನ್ನಡ ನಾಡು-ನುಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಡಾ.ರಾಜ್ ಕುಮಾರ್ ಅವರು, ನಾಡಿನಲ್ಲಿ ಅಣ್ಣಾವ್ರ, ರಾಜಣ್ಣ ಎಂದು ಮನೆ ಮಾತಾಗಿದ್ದಾರೆ. ನಟ ಸಾರ್ವಭೌಮ, ಬಂಗಾರದ ಮನುಷ್ಯ, ವರನಟ ಎಂಬ ಬಿರುದನ್ನು ಪಡೆದಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿವರಿಸಿದರು.
ಡಾ.ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಕ್ಷೇತ್ರದಲ್ಲಿ ಮೇರು ಪರ್ವತ ಇದ್ದಂತೆ ಎಂದ ಅವರು, ರಾಷ್ಟ್ರದ ವಿವಿಧ ರಾಜ್ಯದವರು ಕನ್ನಡ ಕಲಿಯಲು ಡಾ.ರಾಜ್ ಕುಮಾರ್ ಅವರ ಚಲನಚಿತ್ರ ನೋಡುವಂತಾಗಬೇಕು. ಅಷ್ಟರಮಟ್ಟಿಗೆ ಕನ್ನಡ ಭಾಷೆಯ ಪ್ರಬುದ್ಧತೆ ಹೊಂದಿದ್ದರು. ಗೋಕಾಕ್ ಚಳುವಳಿ ಮೂಲಕ ಕನ್ನಡ ನಾಡಿನ ಅಸ್ಮಿತೆ ಬಗ್ಗೆ ಬೆಳಕು ಚೆಲ್ಲಿದ್ದರು ಎಂದು ಪ್ರತಿಪಾದಿಸಿದರು.
ಚಲನಚಿತ್ರ ಕಲಾವಿದರಾದ ನೆರವಂಡ ಉಮೇಶ್ ಮಾತನಾಡಿ, ಡಾ.ರಾಜ್‌ಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯ ಅವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಮುತ್ತುರಾಯ ದೇವರ ಭಕ್ತರಾಗಿದ್ದರು. ಆ ನಿಟ್ಟಿನಲ್ಲಿ ಡಾ.ರಾಜ್‌ಕುಮಾರ್ ಮೂಲ ಹೆಸರು ಮುತ್ತುರಾಜ ಆಗಿತ್ತು. ಬೇಡರ ಕಣ್ಣಪ್ಪ ಚಲನಚಿತ್ರ ಸಂದರ್ಭದಲ್ಲಿ ರಾಜ್‌ಕುಮಾರ್ ಎಂದು ಹೆಸರು ಇಟ್ಟು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ನಟನೆ ಮಾಡಿಲ್ಲ ಎಂದು ತಿಳಿಸಿದ ಅವರು, ಡಾ.ರಾಜ್‌ಕುಮಾರ್ ಅವರು ಸರಳತೆಯ ಸಾಕಾರ ಮೂರ್ತಿಯಾಗಿದ್ದು, ಸಂವೇದನಾಶೀಲರಾಗಿ ಡಾ.ರಾಜ್‌ಕುಮಾರ್ ಅವರು ಬದುಕು ರೂಪಿಸಿಕೊಂಡಿದ್ದರು ಎಂದು ಹೇಳಿದರು.
ಚಲನಚಿತ್ರ ಬರಹಗಾರರಾದ ಎಚ್.ಟಿ.ಅನಿಲ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕರಾದ ಕುಮಾರ ಇತರರಿದ್ದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.