

ತಿ.ನರಸೀಪುರ: ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉಚಿತವಾಗಿ ಕಣ್ಣಿನ ಲೇಸರ್ ಆಪರೇಷನ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭೈರವೇಶ್ವರ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಸುರೇಶ್ ಹೇಳಿದರು.
ತಾಲೂಕಿನ ಹೆಳವರಹುಂಡಿ ಗ್ರಾಮದಲ್ಲಿನ ಆಲಗೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ರೋಗಿಗಳ ಕಣ್ಣು ತಪಾಸಣೆ ನಡೆಸಿ ಮಾತನಾಡಿದರು. ಯಶಸ್ವಿನಿ ಕಾರ್ಡ್ ಹೊಂದಿರುವ ಜನರಿಗೆ ವಿಮೆ ಯೋಜನೆಯಡಿ ಉಚಿತವಾಗಿ ಕಣ್ಣಿನ ತಪಾಸಣೆಯೊಂದಿಗೆ ಅವಶ್ಯವಿರುವವರಿಗೆ ಲೇಸರ್ ಆಪರೇಷನ್ ಮಾಡಲಾಗುತ್ತದೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ವೀರಭದ್ರಪ್ಪ ಮಾತನಾಡಿ, ಕಣ್ಣು ಮಾನವನ ದೇಹದ ಸೂಕ್ಷ್ಮವಾದ ಅಂಗ. ಇದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ವೃದ್ಧರಲ್ಲಿ ಕಣ್ಣಿನ ಪೊರೆ ಕಾಣಿಸಿಕೊಳ್ಳುತ್ತಿದ್ದು, ಅಂತಹವರಿಗೆ ಅನುಕೂಲ ಕಲ್ಪಿಸಲು ಶಿಬಿರ ಆಯೋಜಿಸಲಾಗಿದೆ ಎಂದರು.
ಡಾ.ಮಂಜುನಾಥ್, ಡಾ.ಚಂದನಾ, ಸಹಕಾರ ಅಭಿವೃದ್ಧಿ ಅಧಿಕಾರಿ ರಾಜಣ್ಣ ಮತ್ತಿತರರಿದ್ದರು.